ಬೆಂಗಳೂರಿನ ಸಮೀಪವಿರುವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಲೇ ಇರುತ್ತಾರೆ. ಅದರಲ್ಲೂ ಹೊಸ ವರ್ಷ ಬಂತೆಂದರೆ ಸಾಕು ಈ ತಾಣಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಈ ಬಾರಿ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಹಾಗಾದರೆ ಎಷ್ಟು ದಿನ ಹಾಗೂ ಕಾರಣ ಏನು ಅನ್ನೋದನ್ನ ನೋಡೋಣ .
ಸಾಮಾನ್ಯವಾಗಿ ಹೊಸ ವರ್ಷದ ಸಂದರ್ಭದಲ್ಲಿ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಬೆಂಗಳೂರಿಗರು ನಗರದ ಸಮೀಪವೇ ಇರುವ ನಂದಿ ಬೆಟ್ಟಕ್ಕೆ ಹೋಗಲು ಪ್ಲಾನ್ ಮಾಡಿಕೊಂಡಿರುತ್ತಾರೆ. ಇಂತಹವರಿಗೆ ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಶಾಕ್ ನೀಡಿದೆ. ನಂದಿ ಗಿರಿಧಾಮದಲ್ಲಿ 2025ರ ಹೊಸ ವರ್ಷಾ ಸಂಭ್ರಮಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ.
ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ರಾತ್ರಿ 11 ಗಂಟೆಯವರೆಗೆ ನಂದಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶ ಕೂಡ ನಿರ್ಬಂಧಿಸಿದೆ. ಈ ಮೂಲಕ ನಂದಿ ಬೆಟ್ಟದಲ್ಲಿ ಹೊಸ ವರ್ಷ ಆಚರಣೆ ಮಾಡಲು ಯೋಜನೆಯಲ್ಲಿದ್ದವರಿಗೆ ಶಾಕ್ ನೀಡಿದೆ. ಇದರಿಂದ ಪ್ರವಾಸೋದ್ಯಮ ಇಲಾಖೆಯ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ನಂದಿ ಬೆಟ್ಟದ ಸಮೀಪದಲ್ಲಿವೆ ಸ್ವರ್ಗದ ಅನುಭವ ನೀಡುವ ಪ್ರವಾಸಿ ತಾಣಗಳು ಯಾಕೆಂದರೆ ನಂದಿ ಬೆಟ್ಟಕ್ಕೆ ಸಾಮನ್ಯ ದಿನಗಳಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಹೆಚ್ಚಿನ ಪ್ರವಾಸಿಗರು ಬರುವುದೇ ಹೊಸ ವರ್ಷದ ಸಮಯದಲ್ಲಿ. ಈ ವೇಳೆಯೇ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದರಿಂದ ಪ್ರವಾಸೋದ್ಯಮದ ಆರ್ಥಿಕತೆ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಕಳೆದ ಬಾರಿಯ ಅಂದರೆ 2024ರ ಹೊಸ ವರ್ಷದ ವೇಳೆ ಇದೇ ರೀತಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಹಾಗೆಯೇ 2025ರ ಹೊಸ ವರ್ಷಾಚರಣೆಗೂ ನಿರ್ಬಂಧ ಹೇರಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಇಲ್ಲಿನ ಸುತ್ತಮುತ್ತಲಿನ ಬಹುತೇಕ ಮಂದಿ ನಂದಿ ಬೆಟ್ಟದಲ್ಲಿ ಹೊಸ ವರ್ಷಾಚರಣೆ ಮಾಡಲು ತುಗಾಲಲ್ಲಿ ಕಾಯುತ್ತಿದ್ದರು. ಆದರೆ ಪ್ರವೇಶದ ನಿರ್ಬಂಧದಿಂದ ನಿರಾಸೆ ಆದಂತಾಗಿದೆ. ಆದ್ದರಿಂದ ನಂದಿ ಬೆಟ್ಟದ ಕಡೆಗೆ ಹೋಗುವುದಾದರೆ, ಪ್ಲಾನ್ ಬದಲಾಯಿಸುವುದು ಸೂಕ್ತ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಬೆಳಗಿನ ವೇಳೆ ಸೂರ್ಯೋದ ಹಾಗೂ ಸಂಜೆ ವೇಳೆ ಸೂರ್ಯಸ್ತವನ್ನು ನೋಡುವುದೇ ಒಂಥರಾ ಮಜಾ. ಇದರಿಂದ ಮನಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸುಂದರ ವಾತಾವರಣ, ತಂಪಾದ ಹವಾಗುಣ, ಇಬ್ಬನಿ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿದು ನಲಿಸುವ ವಿವಿಧ ರೀತಿಯ ಹೂಗಳ ಚೆಂದದ ವಯ್ಯಾರ ಎಂತಹವನ್ನು ತನ್ನೆಡೆಗೆ ಸೆಳೆದುಬಿಡುತ್ತವೆ.
ಅಂದಹಾಗೆ ಬೆಂಗಳೂರಿನಿಂದ 61 ಕಿಲೋ ಮೀಟರ್ ದೂರದಲ್ಲಿರುವ ನಂದಿ ಬೆಟ್ಟ ವಾರಾಂತ್ಯದ ಜನಪ್ರಿಯ ತಾಣವಾಗಿದೆ. ನಂದಿದುರ್ಗ ಅಂತಲೇ ಕರೆಯಲ್ಪಡುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,478 ಮೀಟರ್ ಅಂದರೆ 4,850 ಅಡಿಗಳಷ್ಟು ಎತ್ತರದಲ್ಲಿದೆ. ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಯೋಗ ನಂದೀಶ್ವರ ದೇವಾಲಯದ ಹೊರಭಾಗವನ್ನು ಕಾವಲು ಕಾಯುತ್ತಿರುವ ಗೂಳಿ ನಂದಿಯ ಅದ್ಭುತ ಪ್ರತಿಮೆಯಿದೆ. ಆದ್ದರಿಂದ ಈ ಸ್ಥಳಕ್ಕೆ ನಂದಿ ಬೆಟ್ಟ ಎಂದು ಹೆಸರಿಸಲಾಗಿದೆ. ಯೋಗ ನಂದೀಶ್ವರ ದೇವಾಲಯವು ಬೆಟ್ಟಗಳ ಮೇಲೆ ನೆಲೆಗೊಂಡಿದೆ ಮತ್ತು ಶಿವನ ವಾಸಸ್ಥಾನವಾಗಿದೆ.