Friday, April 18, 2025

Latest Posts

ಹಿರಣ್ಯಕಶಿಪುವನ್ನು ಸಂಹರಿಸಲು ನರಸಿಂಹಾವತಾರ ತಾಳಿದ ಮಹಾವಿಷ್ಣು …!

- Advertisement -

Devotional:

ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು ಧರ್ಮ ಸಂಸ್ಥಾಪನೆಗಾಗಿ ತಾಳಿದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು, ನರಸಿಂಹನ ಅವತಾರವಾಯಿತೆಂದು ಪುರಾಣದಲ್ಲಿ ಉಲ್ಲೇಖವಿದೆ.

ನರಸಿಂಹನ ಅವತಾರದಲ್ಲಿ ಮಹಾವಿಷ್ಣುವು ಸಿಂಹದ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ ಮಹಾವಿಷ್ಣು ಈ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ…? ಕೆಲ ಪುರಾಣಗಳ ಪ್ರಕಾರ, ಮಹಾವಿಷ್ಣುವಿನ ವಾಸಸ್ಥಾನವಾದ ವೈಕುಂಠದ ದ್ವಾರಪಾಲಕರೇ ಜಯ-ವಿಜಯರು ಈ ಸಹೋದರರು ವಿಷ್ಣು ದರ್ಶನಕ್ಕೆ ಬಂದ ಋಷಿಕುಮಾರರನ್ನು ತಡೆದ ಶಾಪದ ಪರಿಣಾಮವಾಗಿ ಭೂಲೋಕದಲ್ಲಿ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪುವಾಗಿ ಜನಿಸಿದರು ಎಂದು ಹೇಳಲಾಗಿದೆ .

ಇಬ್ಬರು ಸಹೋದರರ ಪೈಕಿ ಹಿರಣ್ಯಾಕ್ಷನ ಸಂಹಾರಕ್ಕಾಗಿ ಮಹಾವಿಷ್ಣು ವರಾಹ ಅವತಾರ ಕಥೆಯನ್ನು ಈ ಹಿಂದೆಯೇ ಪ್ರಕಟಿಸಿದ್ದೇವೆ. ಇನ್ನು ಹಿರಣ್ಯಾಕ್ಷನ ಸಹೋದರನಾದ ಹಿರಣ್ಯಕಶಿಪು ಸಂಹಾರಕ್ಕಾಗಿ ವಿಷ್ಣು ತಾಳಿದ  ಅವತಾರವೇ ನರಸಿಂಹಾವತಾರ. ತನ್ನ ಸಹೋದರ ಹಿರಣ್ಯಾಕ್ಷನನ್ನು ವರಾಹನ ರೂಪದಲ್ಲಿ ಕೊಂದ ಮಹಾವಿಷ್ಣುವಿನ ಮೇಲೆ ಹಿರಣ್ಯಕಶಿಪುವಿಗೆ ಎಲ್ಲಿಲ್ಲದ ಕೋಪ. ಹೀಗಾಗೇ ಸಹೋದರನ ಸಂಹಾರಕ್ಕೆ ಕಾರಣನಾದ ಮಹಾವಿಷ್ಣುವನ್ನು ಕೊಲ್ಲುವ ಸಂಕಲ್ಪ ಮಾಡ್ತಾನೆ. ಅದಕ್ಕಾಗಿ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಹಿರಣ್ಯಕಶಿಪುವಿನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾಗಿ ವರ ಬೇಡಲು ಹೇಳುತ್ತಾನೆ ಹಾಗ ಹಿರಣ್ಯಕಶಿಪು ನನಗೆ ಸಾವೇ ಬೇಡ, ಅಮರತ್ವ ಕೊಡು ಎಂದು ಕೇಳಿದ, ಬ್ರಹ್ಮ ಅದಕ್ಕೆ ಒಪ್ಪುವುದಿಲ್ಲ ಹಾಗೆಲ್ಲ ಸಾವೇ ಇಲ್ಲದಂತೆ ವರ ಕೊಡಲಾಗದು. ಬೇರೆ ಯಾವ ವರವನ್ನಾದರೂ ಕೇಳು ಎಂದ. ಆಗ ರಾಕ್ಷಸ ಜಾಣತನ ತೋರಿಸಿ, ಮಾನವ ಅಥವಾ ಮೃಗದಿಂದ, ಹಗಲು, ರಾತ್ರಿ, ಮನೆ ಒಳಗೆ ಅಥವಾ ಹೊರಗೆ ಮತ್ತು ಶಸ್ತ್ರ ಅಥವಾ ಅಸ್ತ್ರದಿಂದ ನೀನು ಸೃಷ್ಟಿಸಿದ ಯಾವುದೇ ಜೀವಿಗಳಿಂದ ಸಾವು ಬಾರದಂತೆ ವಿಶೇಷ ವರವನ್ನು ನೀಡೆಂದು ಬೇಡ್ತಾನೆ. ಭಕ್ತನ ಬೇಡಿಕೆಗೆ ಇಲ್ಲ ಎನ್ನಲಾಗದ ಬ್ರಹ್ಮ ಥತಾಸ್ತು ಎಂದು ವರ ನೀಡ್ತಾನೆ. ನನಗೆ ಸಾವೇ ಇಲ್ಲ ಎಂದು ಹಿರಣ್ಯಕಶಿಪು ಖುಷಿಪಟ್ಟುಕೊಂಡ.

ಹಿರಣ್ಯಕಶಿಪು ದಿನೇ ದಿನೇ ಪ್ರಬಲನಾಗುತ್ತಿದ್ದ. ದೇವತೆಗಳಿಗೆ ತುಂಬ ಕಾಟ ಕೊಡುತ್ತಿದ್ದ. ಅವನ ಹಿಂಸೆ ತಾಳಲಾರದೆ ದೇವತೆಗಳು ವಿಷ್ಣುವಿನ ಬಳಿಗೆ ಬರುತ್ತಾರೆ. ಈ ರಾಕ್ಷಸನ ಕಾಟ ತಾಳಲಾಗುತ್ತಿಲ್ಲ. ನಮ್ಮನ್ನು ರಕ್ಷಿಸು ಎಂದು ಬೇಡುತ್ತಾರೆ. ಆಗ ವಿಷ್ಣುವು ಭಯ ಪಡಬೇಡಿ ಸಮಯ ಬಂದಾಗ ನಾನು ಹಿರಣ್ಯಕಶಿಪುವನ್ನು ಸಂಹರಿಸುತ್ತೇನೆ ಎಂದು ಅವರಿಗೆ ಆಶ್ವಾಸನೆ ನೀಡಿದ ವಿಷ್ಣು. ಹಿರಣ್ಯಕಶಿಪುವಿಗೆ ವಿಷ್ಣು ಮತ್ತು ಅವನ ಭಕ್ತರನ್ನು ಕಂಡರಾಗುತ್ತಿರಲಿಲ್ಲ, ನನ್ನ ಸೋದರನನ್ನು ಕೊಂದ ವಿಷ್ಣು ನನ್ನ ಶತ್ರು, ಅವನನ್ನು ಹೇಗಾದರೂ ಕೊಲ್ಲುವೆ ಎನ್ನುತ್ತಿದ್ದ. ನಾನು ವಿಷ್ಣುವಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಸೊಕ್ಕಿನಿಂದ ಹೇಳುತ್ತಿದ್ದ. ಅಷ್ಟೇ ಅಲ್ಲ, ವಿಷ್ಣುವನ್ನು ಪೂಜಿಸಬೇಡಿ, ನನ್ನನ್ನೇ ಪೂಜಿಸಿ ಎಂದು ಹಿರಣ್ಯಕಶಿಪು ಆದೇಶಿಸಿದ್ದ. ಬ್ರಹ್ಮನಿಂದ ವರ ಪಡೆದ ಹಿರಣ್ಯಕಶಿಪು ತನಗೆ ಸಮನಾದವರು ಇನ್ಯಾರೂ ಇಲ್ಲ ಎಂದು ಮೆರೆಯುತ್ತಿದ್ದ. ಆಸಮಯದಲ್ಲಿ ಹಿರಣ್ಯಕಶಿಪುವಿಗೆ ಗಂಡು ಮಗುವಿನ ಜನನವಾಯ್ತು ಮಗು ಪ್ರಹ್ಲಾದನೆಂದು ನಾಮಕರಣಗೊಂಡ .

ಹಿರಣ್ಯಕಶಿಪುವಿನ ಪತ್ನಿ ಕಯಾದು, ಹಿರಣ್ಯಕಶಿಪು ತಪಸ್ಸು ಆಚರಿಸುತ್ತಿದ್ದಾಗ ಅವಳು ನಾರದ ಮುನಿಗಳ ಆಶ್ರಮದಲ್ಲಿದ್ದಳು, ಆಗ ಪ್ರಹ್ಲಾದನಿಗೆ ಜನ್ಮನೀಡಿದಳು. ನಾರದರು ಹೇಳುತ್ತಿದ್ದ ಶ್ರೀಮನ್ ನಾರಾಯಣನ ಕತೆಯನ್ನು ಕೇಳುತ್ತ ಪ್ರಹ್ಲಾದ ಬಾಲ್ಯದಿಂದಲೇ ವಿಷ್ಣುಭಕ್ತನಾದ. ಮುಂದೆ ಗುರುಕುಲದಲ್ಲಿಯೂ ತನ್ನ ಸಹಪಾಠಿಗಳಿಗೆ ಭಗವಂತನನ್ನು ಪೂಜಿಸಿ ಎಂದು ಉಪದೇಶ ನೀಡುತ್ತಿದ್ದ. ಇದರಿಂದಾಗಿ ಗುರುಕುಲದಲ್ಲಿದ್ದ ರಾಕ್ಷಸ ಪುತ್ರರೂ ಭಗವಂತನಲ್ಲಿ ಭಕ್ತಿ ತೋರುತ್ತಿದ್ದರು. ಇದರಿಂದ ಗಾಬರಿಯಾದ ಗುರುಗಳು ಹಿರಣ್ಯಕಶಿಪುವಿನ ಬಳಿ ಹೋಗಿ ಪ್ರಹ್ಲಾದನ ಬಗೆಗೆ ದೂರುಹೇಳಿದರು. ಇದನ್ನು ಕೇಳಿ ಹಿರಣ್ಯಕಶಿಪು ಅತ್ಯಂತ ಕೋಪ ಗೊಂಡ. ನನ್ನ ಮಗನನ್ನು ಕೊಲ್ಲಿ ಎಂದು ಆಜ್ಞಾಪಿಸಿದ. ನಾನಾ ರೀತಿಯಲ್ಲಿ ಕೊಲ್ಲಲು ಪ್ರಯತ್ನಿಸಿದ ,ತನ್ನ ಸೈನಿಕರಿಗೆ ಪ್ರಹ್ಲಾದನನ್ನು ಬೆಟ್ಟದಿಂದ ತಳ್ಳುವಂತೆ ಆಜ್ಞೆ ಮಾಡುತ್ತಾನೆ. ಆನೆಗಳಿಂದ ತುಳಿಸುವಂತೆ ಹೇಳ್ತಾನೆ. ವಿಷ ಸರ್ಪಗಳಿಂದ ಕಚ್ಚಿಸಲು ಹೇಳ್ತಾನೆ. ಕೊನೆಗೆ ಪ್ರಹ್ಲಾದನ ತಾಯಿ ಖಯಾದು ಕೈಯಿಂದಲೇ ವಿಷ ಕುಡಿಸಲು ಹೇಳ್ತಾನೆ. ಈ ಎಲ್ಲಾ ಸಂದರ್ಭಗಳಲ್ಲೂ ಪ್ರಹ್ಲಾದನನ್ನು ಶ್ರೀಮನ್ನಾರಾಯಣ ಕಾಪಾಡ್ತಾನೆ.

ಇದೆಲ್ಲದರಿಂದ ಬೇಸತ್ತ ಹಿರಣ್ಯಕಶಿಪು ಒಂದು ದಿನ ತನ್ನ ಮಗ ಪ್ರಹ್ಲಾದನನ್ನು ಕರೆದು ಪ್ರೀತಿಯಿಂದ ಮಾತನಾಡಿಸ್ತಾನೆ. ಆ ಹರಿ ಎಲ್ಲಿದ್ದಾನೆ..? ಎಂದು ಪ್ರಶ್ನೆಸಿದ ಭಗವಂತನು ಎಲ್ಲೆಲ್ಲೂ ಇರುವುದರಿಂದ ಕಂಬದಲ್ಲಿಯೂ ಇದ್ದಾನೆ ಎಂದು ಪ್ರಹ್ಲಾದ ಉತ್ತರಿಸಿದ. ಹಾಗಾದರೆ ನೋಡೇ ಬಿಡುವ ಎಂದು ಹಿರಣ್ಯಕಶಿಪು ತಿರಸ್ಕಾರದಿಂದ ಆ ಕಂಬವನ್ನು ಗದೆಯಿಂದ ಹೊಡೆಯುತ್ತಾನೆ .ಆಗ ಕಂಬದಿಂದ ಭಾರೀ ಶಬ್ದ ಹೊರಬಂದಿತು. ವಿಷ್ಣುವು ನರಸಿಂಹಾವತಾರದಲ್ಲಿ ಅರ್ಧ ಸಿಂಹ, ಅರ್ಧ ಮನುಷ್ಯನ ಅವತಾರದಲ್ಲಿ ಹೊರಬಂದನು. ಭಗವಂತನ ಈ ವಿಶೇಷವಾದ ರೂಪವನ್ನು ಕಂಡು ಹಿರಣ್ಯಕಶಿಪು ಒಳಗೊಳಗೇ ಬೆದರಿದ. ಇದು ತನ್ನ ಸಾವಿಗೇ ಎಂದು ಶಂಕಿಸಿದ. ಹೀಗಾಗಿ ಅವನು ನೃಸಿಂಹನೊಡನೆ ಹೋರಾಡಲು ಸಿದ್ಧವಾದ. ಕೆಲಕಾಲ ಭಗವಂತನು ಆ ರಾಕ್ಷಸನೊಡನೆ ಕಾದಾಡಿದ. ಅನಂತರ ಮುಸ್ಸಂಜೆಯಲ್ಲಿ ಭಗವಂತನು ರಾಕ್ಷಸನನ್ನು ಬಲವಾಗಿ ಹಿಡಿದು ತನ್ನ ತೊಡೆಯ ಮೇಲೆ ಎಳೆದುಕೊಂಡ. ಅನಂತರ ತನ್ನ ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿ ಕೊಂದು ಹಾಕಿದ. ಹೀಗೆ ಹರಿ ದ್ವೇಷಿಯಾಗಿದ್ದ ಹಿರಣ್ಯಕಶಿಪುವಿನ ಸಂಹಾರಕ್ಕಾಗಿ ಮಹಾವಿಷ್ಣು ನರಸಿಂಹನ ಅವತಾರ ತಾಳಿದ ಎಂದು ಪುರಾಣಗಳು ಹೇಳುತ್ತವೆ.

ಮಹಾವಿಷ್ಣು ಮತ್ಸ್ಯಾವತಾರ ತಾಳಿದ್ದು ಯಾಕೆ..?

​ ಮಹಾವಿಷ್ಣುವಿನ ಕೂರ್ಮಾವತಾರ..!

ಹಿರಣ್ಯಾಕ್ಷನ ಸಂಹಾರಕ್ಕೆ ಮಹಾವಿಷ್ಣುವಿನ ವರಾಹ ಅವತಾರ …!

 

- Advertisement -

Latest Posts

Don't Miss