ಪುದುಚೇರಿ : ಪುದುಚೇರಿ ವಿಧಾನಸಭೆಯಲ್ಲಿ ತಮ್ಮ ಮೈತ್ರಿ ಕೂಟ ಕಾಂಗ್ರೆಸ್ – ಡಿಎಂಕೆ ಸರ್ಕಾರ ಬಹುಮತ ಕಳೆದುಕೊಂಡ ಕಾರಣ ವಿ ನಾರಾಯಣ ಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.ಸೋಮವಾರ ವಿಶ್ವಾಸಮತ ಯಾಚನೆ ಸಾಬೀತು ಮಾಡುವಲ್ಲಿ ನಾರಾಯಣಸ್ವಾಮಿ ವಿಫಲರಾಗಿದ್ದರು. ಬಳಿಕ ರಾಜ ನಿವಾಸಕ್ಕೆ ತೆರಳಿ ಲೆಫ್ಟಿನೆಂಟ್ ಗೌವರ್ನರ್ ತಮಿಳಿಸಾಯಿ ಸೌಂದರ್ಯ ರಾಜನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ, ಎನ್‌ಅರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷಗಳು ಮೂವರು ನಾಮ ನಿರ್ದೇಶಿತ ಸದಸ್ಯರನ್ನು ಬಳಸಿಕೊಂಡು ನಮ್ಮ ಸರ್ಕಾರವನ್ನು ಪತನಗೊಳಿಸಿದ್ದಾರೆ. ಪುದುಚೇರಿ ಹಾಗೂ ದೇಶದ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ವಿಶ್ವಾಸ ಮತಯಾಚನೆಯಲ್ಲಿ ಕಾಂಗ್ರೆಸ್ ಡಿಎಂಕೆ ಮೈತ್ರಿ ಕೂಟ ಶಾಸಕರ ಸಂಖ್ಯೆ ೧೧ಕ್ಕೆ ಕುಸಿದಿತ್ತು. ಪ್ರತಿಪಕ್ಷ ಮೈತ್ರಿಕೂಟ ೧೪ ಶಾಸಕರ ಸಂಖ್ಯಾ ಬಲ ಹೊಂದಿತ್ತು.
ಆಡಳಿತ ರೂಢ ಕಾಂಗ್ರೇಸ್ ಹಾಗೂ ಅದರ ಮಿತ್ರ ಪಕ್ಷ ಡಿಎಂಕೆಯ ತಲಾ ಒಬ್ಬರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಕಳೆದ ವಾರ ಒಬ್ಬ ಸಚಿವ ಸೇರಿದಂತೆ ಇಬ್ಬರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಸೋಮವಾರ ಬಹುಮತ ಸಾಬೀತು ಪಡಿಸುವಂತೆ ಲೆಫ್ಟಿನೆಂಟ್ ಗೌವರ್ನರ್ ತಮಿಳಿಸಾಯಿ ಸೌಂದರ್ಯ ರಾಜನ್ ಆಡಳಿತ ರೂಡ ಕಾಂಗ್ರೇಸ್ ಮೈತ್ರಿ ಪಕ್ಷಕ್ಕೆ ಸೂಚನೆ ನೀಡಿದ್ದರು.
ಶಿವಶಂಕರ ಎಸ್, ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ