ಜಮ್ಮು ಮತ್ತು ಕಾಶ್ಮೀರ : ಇಲ್ಲಿನ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಗುರುವಾರ ತೀವ್ರವಾಗಿ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಖಂಡಿಸಿದ್ದಾರೆ. ಈ ಘಟನೆಗೆ ಭದ್ರತೆ ಹಾಗೂ ಗುಪ್ತಚರ ವೈಫಲ್ಯವೇ ಕಾರಣವಾಗಿದೆ. ಪಾಕಿಸ್ತಾನವು ಈ ಕಾಶ್ಮೀರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಶ್ರೀನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಕಳವಳಕಾರಿಯಾಗಿದೆ. ದೊಡ್ಡ ಸಂಘರ್ಷದ ಸಾಧ್ಯತೆ ಇದೆ ನಾಳೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಇಂದು, ಎರಡು ದೇಶಗಳು ಹೋರಾಟಕ್ಕೆ ಸಿದ್ಧವಾಗುತ್ತಿವೆ. ಈ ಸಂಘರ್ಷವನ್ನುತಪ್ಪಿಸಲು ಪ್ರಯತ್ನಗಳು ಮುಂದುವರೆಯುತ್ತಿವೆ. ಅಲ್ಲದೆ ಈ ಭಯೋತ್ಪಾದಕರು ಮತ್ತು ಅದರ ಹಿಂದಿರುವವರನ್ನು ಪತ್ತೆ ಹಚ್ಚಲು ದಾರಿ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಮುನೀರ್ ದ್ವಿರಾಷ್ಟ್ರಕ್ಕಾಗಿ ಪ್ರಚೋದಿಸುತ್ತಿದ್ದಾನೆ..
ಇದು ಭದ್ರತೆ ಮತ್ತು ಗುಪ್ತಚರ ವೈಫಲ್ಯ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ನಮ್ಮ ಜೀವನವನ್ನು ಚೆನ್ನಾಗಿ ನಡೆಸುತ್ತಿದ್ದೇವೆ ಎನ್ನುವುದನ್ನೇ ಇಷ್ಟಪಡುತ್ತಿರಲಿಲ್ಲ. ನಮ್ಮ ಜನರಲ್ಲಿಯೂ ಅದೇ ಆತಂಕವಿತ್ತು, ಆದ್ದರಿಂದ ಪಾಕಿಸ್ತಾನ ಪಹಲ್ಗಾಮ್ ದಾಳಿ ನಡೆಸಿದೆ. ಅದೊಂದು ವೈಫಲ್ಯಗಳಿಂದ ಬಳಲುತ್ತಿರುವ ದೇಶವಾಗಿದೆ. ಆದರೆ ಈ ದಾಳಿಯಿಂದ ಭಾರತದಲ್ಲಿನ ಮುಸ್ಲಿಮರ ಮೇಲೆ ಯಾವ ಪರಿಣಾಮ ಬೀರಬಹುದು ಎನ್ನುವುದನ್ನು ಅವರು ತಿಳಿಯಲಿಲ್ಲ. ಕಳೆದ 10 ವರ್ಷಗಳಿಂದ ಮುಸ್ಲಿಮರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ, ನಮ್ಮ ಮಸೀದಿಗಳಿಗೆ ಬೆಂಕಿ ಇಡುವ ಕೆಲಸಗಳು ಈಗಾಗಲೇ ನಡೆದಿವೆ. ಅಲ್ಲದೆ ನಾವು ಈಗಾಗಲೇ ಅದರ ಸಂಕಟವನ್ನು ಎದುರಿಸುತ್ತಿದ್ದೇವೆ. ಈಗ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಎರಡು ರಾಷ್ಟ್ರಗಳ ಸಿದ್ಧಾಂತದ ಬಗ್ಗೆ ಮಾತನಾಡುವ ಮೂಲಕ ಪಾಕಿಸ್ತಾನಿಗಳನ್ನು ಪ್ರಚೋದಿಸಿದ್ದಾರೆ. ಯುದ್ಧ ನಡೆದರೆ, ಅದು ಚರ್ಚೆಗೆ ಬರುತ್ತದೆ, ಆದರೆ ಟೇಬಲ್ ಮೇಲೆ ಏನಾಗುತ್ತದೆ ಎಂಬುದು ಅಲ್ಲಾಹನಿಗೆ ಮಾತ್ರ ತಿಳಿದಿದೆ ಎಂದು ಹೇಳಿದ್ದಾರೆ.
ಅಮಾನವೀಯ ಕ್ರಮ..
ಪಹಲ್ಗಾಮ್ ದಾಳಿಯ ನಂತರ ಭಾರತದಿಂದ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಿರುವ ಕ್ರಮ ಅಮಾನವೀಯವಾಗಿದೆ. ಆದರೆ ಸಾಮೂಹಿಕ ಶಿಕ್ಷೆಯು ಪರಿಹಾರವಲ್ಲ, ದಾಳಿಯ ನಂತರ ಭಾರತದಲ್ಲಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಹೊರಡಿಸಿರುವ ಆದೇಶ ಸೂಕ್ತವಾಗಿಲ್ಲ. ಈ ಕ್ರಮ ಒಳ್ಳೆಯದಲ್ಲ, ಇದು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೆಲವು ಜನರು ಕಳೆದ 70 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ, ಕೆಲವರು 25 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಅಂಥವರ ಮೇಲೆ ಈ ಕ್ರಮ ಇದು ಸರಿಯಲ್ಲ. ನಾವು ಈ ಮಟ್ಟಕ್ಕೆ ಹೋಗಬಾರದು ಎಂದು ನಾನು ಭಾವಿಸುತ್ತೇನೆ, ಪಾಕಿಸ್ತಾನ ಒಂದು ವಿಫಲ ರಾಷ್ಟ್ರ. ಎರಡೂ ದೇಶಗಳು ಪರಮಾಣು ಶಕ್ತಿಶಾಲಿಗಳು, ಎರಡೂ ದೇಶಗಳು ತಮ್ಮ ಪರಮಾಣು ಬಾಂಬ್‌ಗಳನ್ನು ಬಳಸಿದರೆ, ಫಲಿತಾಂಶಗಳು ವಿನಾಶಕಾರಿಯಾಗಿರುತ್ತವೆ ಎಂದು ಫಾರೂಕ್ ಅಬ್ದುಲ್ಲಾ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ. ಈ ನಡುವೆಯೇ ಭಾರತದ ದಾಳಿಗೆ ಹೆದರಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಭಾರತದ ಕಠಿಣ ಕ್ರಮಗಳಿಂದ ಪಾಕಿಸ್ತಾನದಲ್ಲಿ ಆತಂಕ ಮನೆಮಾಡಿದೆ.