Temple: ದಸರಾ ಅಂದ್ರೆ ವಿಶ್ವವಿಖ್ಯಾತ ಮೈಸೂರು ದಸರಾ. ಈ ದಸರಾವನ್ನು, ಆನೆ ಅಂಬಾರಿಯನ್ನು, ಅಂಬಾವಿಲಾಸ ಅರಮನೆಯನ್ನು ಕಣ್ತುಂಬಿಕೊಳ್ಳಲು, ದೇಶ- ವಿದೇಶಗಳಿಂದ ಜನ ಮೈಸೂರಿಗೆ ಬರುತ್ತಾರೆ. ಇದರೊಂದಿಗೆ ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಮಾಡುವುದು ಕೂಡ ಅಷ್ಟೇ ಮುಖ್ಯ. ಇಂದು ನಾವು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ.
ಪುರಾಣದ ಪ್ರಕಾರ, ದಾಕ್ಷಾಯಿಣಿ ತನ್ನ ಪತಿ ಶಿವನ ಮಾತುಮೀರಿ, ಆಹ್ವಾನವಿಲ್ಲದ ತನ್ನ ತಂದೆಯ ಯಜ್ಞ ಕಾರ್ಯಕ್ರಮಕ್ಕೆ ಹೋಗಿದ್ದಳು. ಆಗ ದಕ್ಷರಾಜ, ತನಗಿಷ್ಟವಿಲ್ಲದ ಶಿವನನ್ನು ವಿವಾಹವಾದ ಕಾರಣಕ್ಕೆ, ದಾಕ್ಷಾಯಿಣಿಯನ್ನು ಕರಿಯದೇ, ಅವಮಾನ ಮಾಡಿದ್ದು, ಆಕೆ ಯಜ್ಞಕ್ಕೆ ತಾನಾಗಿಯೇ ಬಂದಿದ್ದರೂ, ಶಿವನ ಬಗ್ಗೆ ಬೇಡದ ಮಾತನಾಡಿ ಅಪಮಾನಿಸಿದ್ದ.
ಅದೇ ಕೋಪದಲ್ಲಿ ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದ್ದಳು. ವಿಷಯ ತಿಳಿದು ಕೋಪದಲ್ಲಿದ್ದ ಶಿವ, ಆಕೆಯನ್ನು ಎತ್ತಿಕೊಂಡು, ಶಿವ ತಾಂಡವ ನೃತ್ಯ ಮಾಡಿದ. ಶಿವನ ಕೋಪ ನಿಯಂತ್ರಿಸಲು ವಿಷ್ಣು ಸತಿಯ ದೇಹವನ್ನು 18 ಭಾಗಗಳಾಗಿ ತುಂಡು ಮಾಡುತ್ತಾನೆ. ಆ 18 ತುಂಡುಗಳು 18 ಭಾಗಗಳಾಗಿ ಭೂಮಿಯನ್ನು ಬಿದ್ದು, 18 ಶಕ್ತಿಪೀಠಗಳಾಗಿ ಮಾರ್ಪಾಡಾಗುತ್ತದೆ.
ಸತಿಯ ಕೂದಲು ಬಿದ್ದ ಸ್ಥಳವೇ, ಮೈಸೂರಿನ ಚಾಮುಂಡಿ ದೇವಸ್ಥಾನ. ಈ ದೇವಸ್ಥಾನ 18 ಶಕ್ತಿಪೀಠಗಳಲ್ಲಿ ಒಂದಾಗಿದೆ. ಇದನ್ನು ಮೊದಲು ಕೌಂಚಪೀಠ ಎಂದು ಕರೆಯಲಾಗುತ್ತಿತ್ತು. ಆದರೆ ಇಲ್ಲಿ ಮಹೀಷಾ ಸುರನೆಂಬ ರಾಕ್ಷಸ ಬಂದು, ಎಲ್ಲರಿಗೂ ಉಪಟಳ ನೀಡುತ್ತಿದ್ದ. ಹಾಗಾಗಿ ಇದು ಮಹಿಶನೂರಾಗಿ ಬದಲಾಯಿತು.
ಕೋಣನ ರೂಪದಲ್ಲಿದ್ದ ಮಹಿಷಾಸುರ ದೇವರಿಂದ ವರವನ್ನು ಪಡೆದಿದ್ದ. ಈತನನ್ನು ಓರ್ವ ಮಹಿಳೆ ಬಿಟ್ಟರೆ, ಬೇರೆ ಯಾರೂ ಸಂಹರಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಮಹಿಳೆಯ ಕೈಯಲ್ಲಿ ಏನು ಮಾಡಲೂ ಸಾಧ್ಯವಿಲ್ಲ. ಆಕೆ ಸಾಧಾರಣಳು ಎಂಬುದು ಮಹೀಷನ ಮಾತಾಗಿತ್ತು. ಈತನನ್ನು ಸಂಹರಿಸಲು ಓರ್ವ ಶಕ್ತಿಯನ್ನೇ ತಾವು ಸೃಷ್ಟಿಸಬೇಕು ಎಂದು ತ್ರಿಮೂರ್ತಿಗಳು ನಿರ್ಧರಿಸಿ, ಶಿವ, ವಿಷ್ಣು, ಬ್ರಹ್ಮ ಮೂವರು ಸೇರಿ, ತಮ್ಮ ಅಂಶದಿಂದ ಶಕ್ತಿಯೊಂದರ ಸೃಷ್ಟಿ ಮಾಡಿದರು. ಆ ಶಕ್ತಿಯೇ ಚಾಮುಂಡೇಶ್ವರಿ.
ಚಾಮುಂಡೇಶ್ವರಿ ಸಿಂಹ ವಾಹಿನಿಯಾಗಿ, ಕದಂಬ ವನದಲ್ಲಿ ಮಹಿಷಾಸುರನೊಂದಿಗೆ ಸೆಣಸಾಡುತ್ತಾಳೆ. 9 ದಿನಗಳ ಕಾಲ ಚಾಮುಂಡೇಶ್ವರಿ ಮತ್ತು ಮಹಿಷಾಸುರ ಯುದ್ಧ ಮಾಡಿದ್ದು, ಕೊನೆಯ ದಿನ ಚಾಮುಂಡಿ ಮಹಿಷಾಸುರನನ್ನು ಸಂಹರಿಸುತ್ತಾಳೆ. ಹಾಗಾಗಿ ಆಕೆಯನ್ನು ಮಹಿಷಾಸುರ ಮರ್ದಿನಿ ಎಂದು ಕರೆಯುತ್ತಾರೆ. ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಈ ಕಥೆಯನ್ನು ಅತ್ಯದ್ಭುತವಾಗಿ ತೋರಿಸಲಾಗಿದೆ.
ಬಳಿಕ ಚಾಮುಂಡಿ ಬೆಟ್ಟದಲ್ಲಿ ದೇವಿ ನೆಲೆ ನಿಲ್ಲುತ್ತಾಳೆ. ಆ ಸ್ಥಳ ಮಹಿಶನೂರು ಆದ ಕಾರಣ, ಅದನ್ನು ಮಹಿಶೂರು ಎನ್ನಲಾಗುತ್ತಿತ್ತು. ಅದೇ ಮುಂದುವರಿದು ಈಗ ಮೈಸೂರಾಗಿದೆ.


