Navaratri Special: Temple:ಅಕ್ಷರಾಭ್ಯಾಸ ಅಂದ ತಕ್ಷಣ, ಅಥವಾ ಕರ್ನಾಟಕದ ಪ್ರಸಿದ್ಧ ಶಾರದಾ ಪೀಠ ಅಂದ ತಕ್ಷಣ ನೆನಪಾಗುವ ದೇವಸ್ಥಾನ ಅಂದ್ರೆ, ಶೃಂಗೇರಿ ಶ್ರೀ ಶಾರದಾಂಬೆಯ ದೇವಸ್ಥಾನ. ನವರಾತ್ರಿಯ ವಿಶೇಷವಾಗಿ ನಾವಿಂದು ಶೃಂಗೇರಿ ಶಾರದೆಯ ದೇವಸ್ಥಾನದ ವಿಶೇಷತೆಗಳೇನು ಅಂತಾ ಹೇಳಲಿದ್ದೇವೆ.
ಅವನತಿಗೆ ಸಾಗುತ್ತಿದ್ದ ಹಿಂದೂ ಧರ್ಮದ ಉದ್ಧಾರಕ್ಕಾಗಿ ಅದ್ವೈತ ತತ್ವ ಸಾರಿದ ಶ್ರೀ ಆದಿ ಶಂಕರಾಚಾರ್ಯರು, ಭಾರತದಲ್ಲಿ ಪೀಠಗಳ ಸ್ಥಾಪನೆಗೆ ನಿರ್ಧಾರ ಮಾಡಿದರು. ಅದೇ ರೀತಿ ಕಾಶ್ಮೀರದಲ್ಲಿ ಶ್ರೀ ಶಾರದಾ ಪೀಠ ಸ್ಥಾಪನೆಯ ಬಳಿಕ, ದಕ್ಷಿಣ ಭಾರತದಲ್ಲೂ ಶ್ರೀ ಶಾರದಾ ಪೀಠ ಸ್ಥಾಪನೆಗಾಗಿ ಸ್ಥಳ ಹುಡುಕುತ್ತ ಬಂದರು. ಈ ವೇಳೆ ಅವರಿಗೆ ಸುಡು ಬಿಸಿಲಿನಲ್ಲಿ ತತ್ತರಿಸುತ್ತಿದ್ದ , ಗರ್ಭಿಣಿ ಕಪ್ಪೆಗೆ, ಹಾವು ತನ್ನ ಹೆಡೆ ಎತ್ತಿ ನೆರಳು ಕೊಡುತ್ತಿತ್ತು.
ಸಾಮಾನ್ಯವಾಗಿ ಕಪ್ಪೆ ಮತ್ತು ಹಾವು ಬದ್ಧ ವೈರಿಗಳು. ಕಪ್ಪೆ ಹಾವಿನ ಆಹಾರವಾಗಿದ್ದು, ಎಲ್ಲೆಡೆ ಹಾವು ಕಪ್ಪೆಯನ್ನು ಹಿಡಿದು ತಿನ್ನುತ್ತದೆ. ಆದರೆ ಈ ಸ್ಥಳದಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಕಪ್ಪೆಗೆ, ಸ್ವತಃ ಹಾವೇ ನೆರಳು ನೀಡುತ್ತಿದ್ದುದ್ದನ್ನು ಕಂಡ ಶ್ರೀಗಳು, ಬದ್ಧ ವೈರಿಗಳು, ಇಷ್ಟು ಆಪ್ತರಾಗಿದ್ದನ್ನು ಕಂಡು, ಈ ಸ್ಥಳ ಪೀಠ ಸ್ಥಾಪನೆಗೆ ಪ್ರಾಶಸ್ತ್ಯವಾಗಿದೆ ಎಂದು ನಿರ್ಧಿರಿಸಿ, ಈ ಸ್ಥಳದಲ್ಲಿ ಶೃಂಗೇರಿ ಶಾರದಾ ಪೀಠವನ್ನು ಸ್ಥಾಪನೆ ಮಾಡಿದರು.
ಋಷಿ ಶೃಂಗರು ಈ ಸ್ಥಳದಲ್ಲಿ ತಪಸ್ಸನ್ನು ಆಚರಿಸಿದ ಕಾರಣಕ್ಕೆ, ಈ ಸ್ಥಳಕ್ಕೆ ಶೃಂಗಗಿರಿ ಎಂದು ಕರೆಯಲಾಗುತ್ತಿದ್ದು, ಕಾಲಾಂತರದಲ್ಲಿ ಶೃಂಗೇರಿ ಎಂಬ ಹೆಸರು ಬಂದಿದೆ. ನವರಾತ್ರಿಯಲ್ಲಿ ಬರುವ ಸರಸ್ವತಿ ಪೂಜೆಗೆ ಅಥವಾ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಹೇಳಿಕೊಡುವ ದಿನ, ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ಶೃಂಗೇರಿಗೆ ಕರೆತಂದು, ದೇವಿಯ ಸಾನಿಧ್ಯದಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಹೀಗೆ ಮಾಡಿದರೆ, ಸದಾ ತಾಯಿ ಶಾರದೆಯ ಆಶೀರ್ವಾದ ಮಕ್ಕಳ ಮೇಲಿರುತ್ತದೆ ಎಂಬ ನಂಬಿಕೆ ಇದೆ.