ನೀಟ್ ಪರೀಕ್ಷಾ ಅಕ್ರಮದ ಕಿಡಿ ಈಗ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲದೆ ಕರ್ನಾಟಕಕ್ಕೂ ತಲುಪಿ ಭಾರಿ ದಂಗಲ್ ಎಬ್ಬಿಸಿದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಬಂಧನ ಖಂಡಿಸಿ ಶುರುವಾದ ಪ್ರತಿಭಟನೆ, ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮುಖಾಮುಖಿ ಕಾಳಗಕ್ಕೆ ಕಾರಣವಾಗಿದೆ. ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಅದಕ್ಕೆ ಪ್ರತ್ಯುತ್ತರವಾಗಿ ಕೆಪಿಸಿಸಿ ಕಚೇರಿಗೆ ಬಿಜೆಪಿ ರೇಡ್ ನಡೆಸಿದ್ದು, ಈ ಮಧ್ಯೆ ಬಿಜೆಪಿ ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆದ ಘಟನೆ ರಾಜಕೀಯ ಕಾವನ್ನು ತೀವ್ರಗೊಳಿಸಿದೆ.
ದೆಹಲಿಯಲ್ಲಿ ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಆಗಿದ್ದನ್ನು ಖಂಡಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲಾಗಿತ್ತು. ಈ ವೇಳೆ ದೆಹಲಿ ಪೊಲೀಸರು ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಬಂಧನ ಖಂಡಿಸಿ ಕರ್ನಾಟಕದಲ್ಲೂ ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದು, ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಕಾಂಗ್ರೆಸ್ನ ಈ ಮುತ್ತಿಗೆ ಯತ್ನಕ್ಕೆ ಕೌಂಟರ್ ನೀಡಲು ಬಿಜೆಪಿ ನಾಯಕರು ತಕ್ಷಣವೇ ಅಖಾಡಕ್ಕಿಳಿದರು. ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಪಡೆ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸನ್ನಿವೇಶ ಕೈಮೀರಿ ಹೋಗದಂತೆ ತಡೆದ ಪೊಲೀಸರು ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ಈ ಭಾರಿ ಜಟಾಪಟಿಯ ನಡುವೆಯೇ ಮತ್ತೊಂದು ಹೈ-ಡ್ರಾಮಾ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿಪಿ ಹರೀಶ್ ಅವರ ಮೇಲೆ ಕಿಡಿಗೇಡಿಗಳು ದಿಢೀರ್ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದರು. ಸ್ಥಳದಲ್ಲೇ ಐದಾರು ಮೊಟ್ಟೆಗಳು ಪತ್ತೆಯಾಗಿದ್ದು, ಶಾಸಕರ ಮೇಲೆಯೇ ಮೊಟ್ಟೆ ಎಸೆದ ಪ್ರಸಂಗ ಸ್ಥಳದಲ್ಲಿದ್ದವರನ್ನು ದಿಗ್ಭ್ರಮೆಗೊಳಿಸಿತು.
ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಅಲರ್ಟ್ ಆಗಿ ಮೊಟ್ಟೆ ಎಸೆದ ಕಾಂಗ್ರೆಸ್ ಕಾರ್ಯಕರ್ತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಶಾಸಕ ಬಿಪಿ ಹರೀಶ್ ಅವರನ್ನು ಪೊಲೀಸ್ ಜೀಪ್ನಲ್ಲಿ ಸುರಕ್ಷಿತವಾಗಿ ಕರೆದೊಯ್ಯಲಾಯಿತು. ಸದ್ಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಎರಡೂ ಪಕ್ಷಗಳ ಕಚೇರಿಗಳಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ನೀಟ್ ಅಕ್ರಮದ ವಿಚಾರದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ ಯುದ್ಧ ಮುಂದಕ್ಕೆ ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.




