KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ನೌಕರರ ಸಂಧಾನಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. ‘ನನ್ನ ಹಂತದಲ್ಲಿ ಆಗಬೇಕಿದ್ದ 100 ಕೋಟಿ ರೂ. ಗ್ರಾಚ್ಯುಟಿ ಬಾಕಿಯನ್ನು ಈಗಾಗಲೇ ಬಿಡುಗಡೆ ಮಾಡಿಸಿದ್ದೇನೆ. ನಿವೃತ್ತ ಸಿಬ್ಬಂದಿಗೂ ಹಣ ನೀಡಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಜ್ಜೆ ಇಡಬೇಕಾಗುತ್ತದೆ’ ಎಂದು ಮನವಿ ಮಾಡಿದರು.
ಆದರೆ, MD ಅವರ ಮಾತು ಕೇಳಿ ಪ್ರತಿಭಟನಾ ಸ್ಥಳದಲ್ಲಿದ್ದ ನೌಕರರು ಭಾವುಕರಾಗಿ ಕಣ್ಣೀರು ಹಾಕಿದರು. ನಮ್ಮ ಜೀವನ ನಡೆಸುವುದು ಕಷ್ಟವಾಗಿದೆ. ಸಾಲದ ಬಾಧೆ ಹೆಚ್ಚಾಗಿದೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ 38 ತಿಂಗಳ ಹಿಂಬಾಕಿ ಸಿಗುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ’ ಎಂದು ನೌಕರರು ಪಟ್ಟು ಹಿಡಿದರು. ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಸಾರಿಗೆ ಮುಖಂಡರು ಆರೋಪಿಸಿದ್ದಾರೆ.
ಸರ್ಕಾರವು 26 ತಿಂಗಳ ಹಿಂಬಾಕಿ ನೀಡಲು ಸಿದ್ಧವಿದ್ದು, ಬಜೆಟ್ ನಂತರ ಶೀಘ್ರವಾಗಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳ ಬಗ್ಗೆ ಚರ್ಚಿಸಲು ಬಾಗಿಲು ತೆರೆದಿದೆ ಎಂದು ಅಕ್ರಂ ಪಾಷಾ ತಿಳಿಸಿದ್ದಾರೆ. ಆದರೆ, 38 ತಿಂಗಳ ಪೂರ್ಣ ಹಣ ಸಿಗದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರರು ಎಚ್ಚರಿಸಿದ್ದಾರೆ. ನಾಳೆಯಿಂದ ಸಾರಿಗೆ ಬಂದ್ ಆಗಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.




