ಮೈಸೂರಿನ ಬನ್ನಿಮಂಟಪದಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಅದಕ್ಕೆ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಕಟ್ಟಡದ ಮುಂಭಾಗದ ಹೊರಮೇಲ್ಮ ಅರಮನೆಯಂತೆ ಕಾಣುವಂತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಎರಡು ವರ್ಷಗಳಲ್ಲಿ ನಗರದಲ್ಲಿ ಮತ್ತೊಂದು ಬಸ್ ನಿಲ್ದಾಣ ತಲೆ ಎತ್ತಲಿದ್ದು, ಅಂಬಾವಿಲಾಸ ಅರಮನೆಯ ಪ್ರತಿರೂಪದಂತೆ ಮೈದಳೆಯಲಿದೆ. ಅಲ್ಲಿರುವ ಕೆಎಸ್‌ಆರ್‌ಟಿಸಿಗೆ ಸೇರಿದ 14 ಎಕರೆ ಜಾಗದಲ್ಲಿ ನಿಲ್ದಾಣ ನಿರ್ಮಿಸಲಾಗುತ್ತಿದೆ.
ವಿಭಾಗೀಯ ಕಚೇರಿ ಬಸ್ ಘಟಕಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಅತ್ಯಾಧುನಿಕ ಕೇಂದ್ರೀಯ ಬಸ್ ನಿಲ್ದಾಣ ಇದಾಗಲಿದೆ. ಯೋಜನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಬಳಿಕ, ಜೂನ್ 2ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.
ಈಗಿರುವ ಬಸ್‌ನಿಲ್ದಾಣದ ಸುತ್ತಮುತ್ತ ಹೋಟೆಲ್ ಮೊದಲಾದ ಉದ್ಯಮ ಹೊಂದಿರುವವರು, ಹೋಟೆಲ್ ಮಾಲೀಕರ ಸಂಘದವರು ಹಾಗೂ ಮೈಸೂರು ಗ್ರಾಹಕರ ಪರಿಷತ್ತು ಮೊದಲಾದವರ ವಿರೋಧದ ನಡುವೆಯೂ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಚಾಲನೆ ನೀಡಿದ್ದಾರೆ. ಕಾಮಗಾರಿಯನ್ನು ಕೆಲವೇ ದಿನಗಳಲ್ಲಿ ಆರಂಭಿಸಲು ಸಾರಿಗೆ ಇಲಾಖೆಯಿಂದ ಸಿದ್ದತೆ ಕೂಡ ಮಾಡಿಕೊಳ್ಳಲಾಗಿದೆ.
ಇನ್ನು ಹೊಸ ನಿಲ್ದಾಣ ನಿರ್ಮಾಣಗೊಂಡ ನಂತರವೂ ಬೆಂಗಳೂರು-ನೀಲಗಿರಿ ರಸ್ತೆಯಲ್ಲಿರುವ ಈಗಿನ ನಿಲ್ದಾಣವನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು. ಅಲ್ಲಿಗೆ ಮೈಸೂರು ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಿಂದ ಮಂಡ್ಯ ಚಾಮರಾಜನಗರ ಮೊದಲಾದ ಕಡೆಗಳಿಂದ ತಾಲ್ಲೂಕು ಕೇಂದ್ರಗಳಿಂದ ಬರುವಂತಹ ಹಾಗೂ ಹೋಗುವಂತಹ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು. ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ಹೊರರಾಜ್ಯಗಳಿಗೆ ತೆರಳುವ ಬಸ್‌ಗಳು ಬನ್ನಿಮಂಟಪದ ಬಸ್ ನಿಲ್ದಾಣದಿಂದ ಹೊರಡುತ್ತವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ