Thursday, December 4, 2025

Latest Posts

ಆರ್.ಸಿ ಡಿಎಲ್ ನಲ್ಲಿ ಹೊಸ ಬದಲಾವಣೆ!

- Advertisement -

ಕರ್ನಾಟಕ ಸಾರಿಗೆ ಇಲಾಖೆ ಇದೀಗ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ. ಒಂದೇ ಸ್ಕ್ಯಾನ್‌ನಲ್ಲಿ ಸಮಗ್ರ ಮಾಹಿತಿ ಸಿಗುವಂತೆಯೇ, ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆಗೆ ಇಲಾಖೆ ಅಧಿಕೃತ ಚಾಲನೆ ನೀಡಿದೆ. ಶೀಘ್ರದಲ್ಲೇ ಎಲ್ಲ ವಾಹನ ಮಾಲೀಕರಿಗೂ ಹೊಸ ತಂತ್ರಜ್ಞಾನದ ಈ ಕಾರ್ಡ್‌ಗಳು ತಲುಪಲಿವೆ.

ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸ ಆರ್.ಸಿ. ಸ್ಮಾರ್ಟ್ ಕಾರ್ಡ್ ಬಿಡುಗಡೆ ಮಾಡಿದರು. ಈ ಕಾರ್ಡ್‌ಗಳಲ್ಲಿ 64 ಕೆ.ಬಿ ಸಾಮರ್ಥ್ಯದ ಮೈಕ್ರೋ ಚಿಪ್ ಅಳವಡಿಸಲ್ಪಟ್ಟಿದ್ದು, ಎನ್‌ಐಸಿ ವಿನ್ಯಾಸದ ಕ್ಯೂಆರ್ ಕೋಡ್ ಸಹ ಸೇರಿಸಲಾಗಿದೆ. ಇದರಿಂದ ಕಾರ್ಡ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಷ್ಟರಲ್ಲಿ ವಾಹನ ಮತ್ತು ಮಾಲೀಕರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಹೊಸ ಆರ್.ಸಿ. ಮತ್ತು ಡಿ.ಎಲ್. ಕಾರ್ಡ್‌ಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೂಪಗೊಂಡಿವೆ. ಈಗಿನಿಂದ ಹೊಸದಾಗಿ ಅರ್ಜಿ ಸಲ್ಲಿಸುವವರೆಲ್ಲರಿಗೆ ಈ ಸ್ಮಾರ್ಟ್ ಕಾರ್ಡ್‌ಗಳು ಲಭ್ಯ. ಈಗಾಗಲೇ ಕಾರ್ಡ್ ಇರುವವರೂ ಬಯಸಿದರೆ 200 ರೂಪಾಯಿ ಪಾವತಿಸಿ ಹೊಸ ಕಾರ್ಡ್ ಪಡೆಯಬಹುದು ಎಂದು ಹೇಳಿದರು.

ಈ ಕಾರ್ಡ್ ಮುದ್ರಣಕ್ಕಾಗಿ ಇಟಲಿಯಿಂದ ಆಮದು ಮಾಡಿದ ಎರಡು ವಿಶೇಷ ಯಂತ್ರಗಳನ್ನು ಬಳಸಲಾಗುತ್ತಿದ್ದು, ಒಂದು ಗಂಟೆಗೆ 500 ರಿಂದ 600 ಕಾರ್ಡ್‌ಗಳನ್ನು ಮುದ್ರಿಸುವ ಸಾಮರ್ಥ್ಯ ಈ ಯಂತ್ರಗಳಿಗೆ ಇದೆ. ಪ್ರತಿದಿನ ಸುಮಾರು 15 ಸಾವಿರ ಕಾರ್ಡ್‌ಗಳು ಪ್ರಿಂಟ್ ಆಗುತ್ತವೆ. ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಈ ಹೊಸ ಸ್ಮಾರ್ಟ್ ಕಾರ್ಡ್‌ಗಳನ್ನು ರವಾನಿಸಲಾಗುತ್ತದೆ. ಹೊಸ ಕಾರ್ಡ್‌ಗೆ 200 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದ್ದು, ಅದರಲ್ಲೂ 135 ರೂಪಾಯಿ ರಾಜ್ಯ ಸರ್ಕಾರಕ್ಕೆ ಹಾಗೂ 64 ರೂಪಾಯಿ ಸೇವಾದಾರರಿಗೆ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. “ದೇಶದಲ್ಲಿ ಇದುವರೆಗೂ ಬಳಸಲಾಗದ ಅತ್ಯಾಧುನಿಕ ತಂತ್ರಜ್ಞಾನವನ್ನು ಕರ್ನಾಟಕ ಈಗ ಬಳಸುತ್ತಿದೆ” ಎಂದು ಅವರು ಹೇಳಿದರು.

ಹಳೆಯ ಆರ್.ಸಿ. ಮತ್ತು ಡಿ.ಎಲ್. ಕಾರ್ಡ್‌ಗಳು ಮುಂದುವರೆಯುತ್ತವೆ. ಆದರೆ ಡಿಸೆಂಬರ್ 15ರಿಂದ ಹೊಸ ಡಿ.ಎಲ್. ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ದೇಶಾದ್ಯಂತ ಒಂದೇ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಮುದ್ರಿಸಿ ವಾಹನ ಚಾಲಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರಿಗೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಎ.ಎಂ. ಯೋಗೀಶ್ ಹಾಗೂ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss