Haveri News: ಹಾನಗಲ್‌ನಲ್ಲಿ ನೂತನ ಗ್ರಾಮದೇವಿ ದೇವಸ್ಥಾನ ಲೋಕಾರ್ಪಣೆ!: ಮಾಜಿ ಸಿಎಂ ಬೊಮ್ಮಾಯಿ ಭಾಗಿ

Haveri News: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಶ್ರೀ ಗ್ರಾಮದೇವಿ ದ್ಯಾಮವ್ವ ದೇವಿಯ ನೂತನ ಕಲ್ಲಿನ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ದಿವ್ಯ ಕಳಸಾರೋಹಣ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಿತು. ಈ ಶ್ರದ್ಧಾ ಭಕ್ತಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೇವಿಯ ದರ್ಶನ ಪಡೆದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ನಿಷ್ಕಲ್ಮಶ ಹಾಗೂ ನಿಷ್ಕಾಮ ಭಕ್ತಿಯಿಂದ ಮಾತ್ರವೇ ದೈವತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಗವಂತನನ್ನು ಪ್ರೀತಿಸುವುದೇ ನಿಜವಾದ ಭಕ್ತಿ. ಎಲ್ಲಿ ಪವಿತ್ರ ಮನಸ್ಸಿನ ಭಕ್ತಿ ಇರುತ್ತದೆಯೋ ಅಲ್ಲಿ ದೇವರ ಸಾನ್ನಿಧ್ಯ ಮತ್ತು ದೈವಿಕ ಶಕ್ತಿ ಜಾಗೃತಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ದೇವರ ದೈವತ್ವವು ಭಕ್ತರ ಅಪಾರ ಶ್ರದ್ಧೆಯಿಂದ ಹೊರಹೊಮ್ಮುತ್ತದೆ ಎಂದ ಬೊಮ್ಮಾಯಿ, ಭಕ್ತರೆಲ್ಲರೂ ಒಗ್ಗೂಡಿ ನಿರ್ಮಿಸಿರುವ ಈ ಭವ್ಯ ಗ್ರಾಮದೇವಿ ದೇವಸ್ಥಾನವು ಕಲಾತ್ಮಕವಾಗಿ ಹಾಗೂ ಪ್ರಶಂಸನೀಯವಾಗಿ ಮೂಡಿಬಂದಿದೆ ಎಂದರು. ದೇವಸ್ಥಾನ, ಸಾರ್ವಜನಿಕ ಕೆಲಸಗಳು ಹಾಗೂ ನೀರಾವರಿ ಯೋಜನೆಗಳು ಸೇರಿದಂತೆ ಯಾವುದೇ ಜನಪರ ಕೆಲಸಗಳು ಸಮಾಜದ ಸರ್ವರಿಗೂ ತಲುಪಿದಾಗ ಮಾತ್ರ ಅವುಗಳ ನಿಜವಾದ ಮಹತ್ವ ಹೆಚ್ಚಾಗುತ್ತದೆ ಎಂದು ಹೇಳಿದರು.

ಹಸಿದವನಿಗೆ ಅನ್ನ, ಹಸಿದ ಮೆದುಳಿಗೆ ವೈಚಾರಿಕತೆ ಹಾಗೂ ಹೃದಯಕ್ಕೆ ಅರಿವು ಮೂಡಿಸುವುದೇ ನಿಜವಾದ ಜಗದ್ಗುರುತ್ವ ಎಂದು ನುಡಿದ ಬೊಮ್ಮಾಯಿ, ಹಾನಗಲ್‌ನಲ್ಲಿ ಭಕ್ತಿಯ ಸುಧೆ ಹರಿಯಲು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನವೇ ಕಾರಣ ಎಂದರು. ಈ ಪವಿತ್ರ ಕಳಸಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಧಾರ್ಮಿಕ ಧುರೀಣರು, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

About The Author