ನವದೆಹಲಿ: ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಲ್ಯಾಟರಲ್ ಎಂಟ್ರಿ ನೇಮಕಾತಿ (lateral entry appointments)ಗಳ ಬಗ್ಗೆ ಜಾಹೀರಾತು ಹಿಂತೆಗೆದುಕೊಂಡಿದ್ದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ (NDA government) ಇದೀಗ ಮಿತ್ರಪಕ್ಷಗಳ ಜೊತೆ ಚರ್ಚಿಸಲು ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ವಿದೇಶ ಪ್ರವಾಸ ಮುಗಿಸಿ ಬಂದ ಕೂಡಲೇ ಮಿತ್ರಪಕ್ಷಗಳ ಜೊತೆ ಚರ್ಚಿಸಿ ಮುಂದಿನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಲ್ಯಾಟರಲ್ ಎಂಟ್ರಿ ಪ್ರಕ್ರಿಯೆ (lateral entry process)ಯಲ್ಲಿ ಮೀಸಲಾತಿ ಕೊರತೆ ಕುರಿತು ಮಿತ್ರಪಕ್ಷಗಳ ಜೊತೆಗಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷಗಳು ಲ್ಯಾಟರಲ್ ಎಂಟ್ರಿ ನೇಮಕಾತಿಯನ್ನು ವಿವಾದ (controversy) ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಲ್ಯಾಟರಲ್ ಎಂಟ್ರಿ ಮೂಲಕ ಗುತ್ತಿಗೆ ಆಧಾರದ ಮೇಲೆ ತಜ್ಞರ ನೇಮಕಾತಿಯಲ್ಲಿ ಮೀಸಲಾತಿ ಅನ್ವಯಿಸುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕೆಲ ಪ್ರಸ್ತಾವಿತ ಬದಲಾವಣೆಗಳು ಸಮಾನ ಪ್ರಾತಿನಿಧ್ಯದ ತತ್ವಗಳೊಂದಿಗೆ ಸಮತೋಲನಗೊಳಿಸುವ ಗುರಿಯನ್ನು ಹೊಂದಿವೆ ಎನ್ನಲಾಗುತ್ತಿದೆ.
ಮಾಸಾಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಲ್ಯಾಟರಲ್ ಎಂಟ್ರಿ ನೇಮಕಾತಿಗೆ ಹೊಸ ಅಧಿಸೂಚನೆ (Fresh notification)ಯನ್ನು ಹೊರಡಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನ ಅಂದರೆ ಸೆಪ್ಟೆಂಬರ್ 17ರಂದು SC/ST ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಅರ್ಹ ವೃತ್ತಿಪರರಿಗೆ (deserving professionals) ಭರ್ಜರಿ ಉಡುಗೊರೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಆಗಸ್ಟ್ 17ರಂದು ಲ್ಯಾಟರಲ್ ಎಂಟ್ರಿ ನೇಮಕಾತಿ ಜಾಹೀರಾತನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಕೂಡಲೇ ಬಿಜೆಪಿಯ ಐಟಿ ಮುಖ್ಯಸ್ಥ ಮತ್ತು ಹಿರಿಯ ನಾಯಕ ಅಮಿತ್ ಮಾಳವಿಯಾ (Amit Malviya) ಲ್ಯಾಟರಲ್ ಪ್ರವೇಶ ಅಧಿಸೂಚನೆಯನ್ನು ಹಿಂಪಡೆಯಲಾಗಿದೆಯೇ ಹೊರತು ರದ್ದುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.