ನವದೆಹಲಿ: ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಯ್ಕೆಯಾಗಿರುವ ನರೇಂದ್ರ ಮೋದಿ (PM Narendra Modi) ಅವರೇ ಮುಂದಿನ 5 ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುತ್ತಾರಾ..? ಇಲ್ಲವಾ..? ಎಂಬ ಚರ್ಚೆ ಸದ್ಯ ಬಿಜೆಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಮೋದಿ 5 ವರ್ಷ ಅಧಿಕಾರ ಪೂರ್ಣಗೊಳಿಸಲಿ ಅಥವಾ ಅದಕ್ಕೂ ಮೊದಲೇ ನಿರ್ಗಮಿಸಲಿ, ಅವರ ನಂತರ ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಯಾರು ಸೂಕ್ತ ವ್ಯಕ್ತಿ..? ಮೋದಿ ನಿರ್ಗಮನದ ಬಳಿಕ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಯಾರನ್ನು ಆಯ್ಕೆ ಮಾಡಬಹುದು..? ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಇಂಡಿಯಾ ಟುಡೇ ರಾಷ್ಟ್ರೀಯ ಸುದ್ದಿವಾಹಿನಿ ನಡೆಸಿರುವ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಮೋದಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಯಾರು ಎಂಬ ಸೂಕ್ತ ವ್ಯಕ್ತಿ ಬಗ್ಗೆ ದೇಶದ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅಮಿತ್ ಶಾ ನಂ.1: ಯೋಗಿಗೆ 2ನೇ ಸ್ಥಾನ:
ಸಮೀಕ್ಷೆಯಲ್ಲಿ ಶೇಕಡಾ 25ರಷ್ಟು ಜನ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಹೆಸರನ್ನು ಅನುಮೋದಿಸಿದ್ದಾರೆ. ಈ ಮೂಲಕ ಬಿಜೆಪಿಯ ಇತರೆ ಪ್ರಭಾವಿ ನಾಯಕರಾದ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ನಿತಿನ್ ಗಡ್ಕರಿ (Nitin Gadkari) ಅವರಿಗಿಂತಲೂ ಪ್ರಧಾನಿ ಹುದ್ದೆಗೆ ಅಮಿತ್ ಶಾ ಅವರೇ ಮುಂಚೂಣಿಯಲ್ಲಿದ್ದಾರೆ. ಅಮಿತ್ ಶಾ ನಂತರದ ಸ್ಥಾನದಲ್ಲಿ ಇರುವುದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಯೋಗಿ ಆದ್ಯತ್ಯನಾಥ್ ಪರ ಶೇಕಡಾ 19ರಷ್ಟು ಜನ ಒಲವು ತೋರಿಸಿದ್ದಾರೆ. ಶೇಕಡಾ 13ರಷ್ಟು ಮಂದಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಬೆಂಬಲಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವಾಣ್ (Shivraj Singh Chouhan) ಅವರಿಗೆ ತಲಾ ಶೇಕಡಾ 5ರಷ್ಟು ಮತಗಳು ದೊರೆತಿದ್ದು, ಇಬ್ಬರು ನಾಯಕರು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಹಂತ ಹಂತವಾಗಿ ಕುಸಿದ ಅಮಿತ್ ಶಾ ಜನಪ್ರಿಯತೆ:
ಇಂಡಿಯಾ ಟುಡೇ ನಡೆಸಿರುವ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಶೇಕಡಾ 25ರಷ್ಟು ಮತಗಳೊಂದಿಗೆ ಅಮಿತ್ ಶಾ ಉಳಿದ ಬಿಜೆಪಿ ನಾಯಕರಿಗಿಂತಲೂ ಮುಂದಿದ್ದಾರೆ. ಆದರೆ 2024ರ ಫೆಬ್ರವರಿ ಮತ್ತು 2023ರ ಆಗಸ್ಟ್‌ನಲ್ಲಿ ನಡೆಸಿದ್ದ ಸರ್ವೆಯ ಫಲಿತಾಂಶಕ್ಕೆ ಹೋಲಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆ ಹಂತ ಹಂತವಾಗಿ ಕಡಿಮೆಯಾಗಿದೆ. ಮತ್ತೊಂದು ಗಮನಾರ್ಹ ಸಂಗತಿ ಅಂದರೆ ಒಟ್ಟಾರೆ ಶೇಕಡಾ 25ರಷ್ಟು ಜನರ ಪೈಕಿ ದಕ್ಷಿಣ ಭಾರತದವರೇ ಅತೀ ಹೆಚ್ಚು ಅಮಿತ್ ಪರ ಒಲವು ತೋರಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಅಮಿತ್ ಶಾ ಬಳಿಕ ಯೋಗಿ ಪ್ರಭಾವ ಕುಸಿತ:
ಇನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಭಾವವೂ ಕಡಿಮೆಯಾಗಿದೆ. ಪ್ರಸಕ್ತ ಸಮೀಕ್ಷೆಯಲ್ಲಿ ಶೇಕಡಾ 19ರಷ್ಟು ಜನ ಯೋಗಿ ಪರ ಒಲವು ತೋರಿದ್ದಾರೆ. ಆದ್ರೆ, 2023ರ ಆಗಸ್ಟ್ ನಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಶೇಕಡಾ 25 ಹಾಗೂ 2024ರ ಫೆಬ್ರವರಿಯಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಶೇಕಡಾ 24ರಷ್ಟು ಜನರ ಬೆಂಬಲ ದೊರೆತಿತ್ತು. ಆದರೆ ಇದೀಗ ಯೋಗಿ ಪ್ರಭಾವ ಶೇಕಡಾ 19ಕ್ಕೆ ಇಳಿಕೆಯಾಗಿದೆ.
ಬಿಜೆಪಿಯಲ್ಲಿ ಹೆಚ್ಚಿದ ರಾಜನಾಥ್, ಚೌವಾಣ್ ಶಕ್ತಿ:
ಒಂದೆಡೆ ಅಮಿತ್ ಶಾ, ಯೋಗಿ ಆದಿತ್ಯನಾಥ್ ಪ್ರಭಾವ ಹಂತ ಹಂತವಾಗಿ ಕಡಿಮೆಯಾಗಿದ್ದರೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಶಿವರಾಜ್ ಸಿಂಗ್ ಚೌವಾಣ್ ಕಡೆಗೆ ದೇಶದ ಜನರ ಒಲವು ಹೆಚ್ಚುತ್ತಿದೆ. ಈ ಹಿಂದಿನ ಸಮೀಕ್ಷೆಗಳಿಗೆ ಹೋಲಿಸಿದರೆ ರಾಜನಾಥ್ ಸಿಂಗ್ ಅವರ ಬೆಂಬಲ ಶೇಕಡಾ1.2ರಷ್ಟು ಹೆಚ್ಚಾಗಿದೆ. ಇನ್ನು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ 2023ರ ಆಗಸ್ಟ್‌ನಲ್ಲಿ ಶೇಕಡಾ 2.9ರಷ್ಟು ಜನರ ಬೆಂಬಲವಿತ್ತು. ಆದ್ರೆ ಈ ಬಾರಿ ಶಿವರಾಜ್ ಸಿಂಗ್ ಚೌವಾಣ್ ಅವರೇ ಪ್ರಧಾನಿ ಹುದ್ದೆಗೆ ಸೂಕ್ತ ಎಂದು ಶೇಕಡಾ 5.4ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
2 ವರ್ಷದ ಬಳಿಕ ಅಧಿಕಾರ ತ್ಯಜಿಸುತ್ತಾರಾ ಮೋದಿ..?
ಬಿಜೆಪಿ ನಾಯಕರೇ ಹಾಕಿಕೊಂಡ ವಯಸ್ಸಿನ ಮಿತಿ ನಿಯಮದ ಪ್ರಕಾರ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ. ಇದಕ್ಕೆ ಕೆಲವು ಕಡೆ ವಿನಾಯಿತಿ ನೀಡಿದರೂ, ಕೆಲವು ನಾಯಕರನ್ನು ಬಲವಂತವಾಗಿ ಅಧಿಕಾರದಿಂದ ಇಳಿಸಿದ ಉದಾಹರಣೆಗಳಿವೆ. ಅದಕ್ಕೆ ಉದಾಹರಣೆ ಅಂದರೆ 75 ವರ್ಷ ತುಂಬಿದ ಕೂಡಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತ್ತು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ವಯಸ್ಸು 73 ವರ್ಷ. 2 ವರ್ಷದ ಬಳಿಕ ಮೋದಿ 75ನೇ ವರ್ಷಕ್ಕೆ ಕಾಲಿಡಲಿದ್ದು, 2 ವರ್ಷದ ನಂತರ ಮೋದಿ ಅಧಿಕಾರವನ್ನು ತ್ಯಜಿಸುತ್ತಾರಾ ಎಂಬುದು ಸದ್ಯ ಭಾರಿ ಕುತೂಹಲ ಮೂಡಿಸಿದೆ.