ಖಾಸಗಿ ಕ್ಷಣಗಳ ಬಯಕೆ ಈಡೇರಿಸಿಕೊಳ್ಳಲು ಹಾಗೂ ಸುಂದರಿಯರ ಜತೆ ಹರಟೆ ಹೊಡೆಯಲು ಡೇಟಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವ ಮುನ್ನ ಎಚ್ಚರ ಅಗತ್ಯವಾಗಿದೆ. ಏಕೆಂದರೆ, ಅಪರಿಚಿತ ಯುವತಿಯರ ಹೆಸರಿನಲ್ಲಿ ಸೈಬರ್ ವಂಚಕರು ಖಾಸಗಿ ದೃಶ್ಯಗಳನ್ನು ಪಡೆದು ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಅಪರಿಚಿತ ಯುವತಿಯರ ಬಲೆಗೆ ಬಿದ್ದು, ಮೂವರು ಯುವಕರು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ನಿರಂತರ ಹಣ ಸುಲಿಗೆಗೆ ಬೇಸತ್ತ ಸಂತ್ರಸ್ತರು ವೈಟ್‌ಫೀಲ್ಡ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾರತಹಳ್ಳಿ ವ್ಯಾಪ್ತಿಯಲ್ಲಿ ವಾಸಿಸುವ 26 ವರ್ಷದ ಯುವಕ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಜನವರಿ 3ರಂದು ಟಿಂಡರ್ ಡೇಟಿಂಗ್ ಆ್ಯಪ್ ಡೌನ್‌ಲೋಡ್ ಮಾಡಿ ತಮ್ಮ ಪ್ರೊಫೈಲ್ ಸೃಷ್ಟಿಸಿದ್ದರು. ಅದೇ ಆ್ಯಪ್‌ನಲ್ಲಿ “ಸಾನ್ವಿ” ಹೆಸರಿನ ಯುವತಿ ಪರಿಚಯವಾಗಿದ್ದು, ಬಳಿಕ ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತನಾಡತೊಡಗಿದ್ದರು.
ಅದೇ ದಿನ ಸಾನ್ವಿ ವಾಟ್ಸಾಪ್ ವಿಡಿಯೊ ಕರೆ ಮಾಡಿದ್ದು, ಕರೆ ವೇಳೆ ಬೆತ್ತಲೆಯಾಗಿ ಯುವಕನನ್ನೂ ಅದೇ ರೀತಿ ವರ್ತಿಸಲು ಪ್ರಚೋದಿಸಿದ್ದಾಳೆ. ಕೆಲ ನಿಮಿಷಗಳ ಕಾಲ ಇಬ್ಬರೂ ಬೆತ್ತಲೆಯಾಗಿ ವಿಡಿಯೊ ಕರೆ ನಡೆಸಿದ್ದು, ಈ ವೇಳೆ ಯುವಕನ ಖಾಸಗಿ ದೃಶ್ಯವನ್ನು ಸಾನ್ವಿ ಗುಪ್ತವಾಗಿ ದಾಖಲಿಸಿಕೊಂಡಿದ್ದಾಳೆ.
ಜನವರಿ 4ರಂದು ಆ ವಿಡಿಯೊವನ್ನು ವಾಟ್ಸಾಪ್‌ಗೆ ಕಳುಹಿಸಿ, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡ ಯುವಕ ಹಂತ ಹಂತವಾಗಿ ತನ್ನ ಎರಡು ಬ್ಯಾಂಕ್ ಖಾತೆಗಳು ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಒಟ್ಟು 5.14 ಲಕ್ಷ ರೂ. ಗಳನ್ನು ವಂಚಕಿಯ ಖಾತೆಗೆ ವರ್ಗಾಯಿಸಿದ್ದಾನೆ. ಇನ್ನಷ್ಟು ಹಣಕ್ಕೆ ಒತ್ತಾಯ ಮಾಡಿದಾಗ ಕಂಗಾಲಾದ ಯುವಕ ಸೈಬರ್ ಪೊಲೀಸರ ಮೆಟ್ಟಿಲೇರಿದ್ದಾನೆ.
ವರದಿ : ಲಾವಣ್ಯ ಅನಿಗೋಳ




