Saturday, May 17, 2025

Latest Posts

ಭಾರತಕ್ಕೆ ಟೆಸ್ಲಾ : ಏನಾಯ್ತು ಮಸ್ಕ್‌, ನಮೋ ಮಹತ್ವದ ಚರ್ಚೆ..?

- Advertisement -

ಬೆಂಗಳೂರು / ನವದೆಹಲಿ : ಕಳೆದ ಕೆಲ ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಟೆಕ್‌ ದಿಗ್ಗಜ ಹಾಗೂ ಬಿಲಿಯನೇರ್‌ ಉದ್ಯಮಿ ಇಲಾನ್‌ ಮಸ್ಕ್‌ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದಾದ ಬಳಿಕ ಈಗ ಮತ್ತೊಮ್ಮೆ ಇಬ್ಬರೂ ದೂರವಾಣಿ ಮೂಲಕ ಮಹತ್ವದ ಮಾತುತೆ ನಡೆಸಿದ್ದಾರೆ.

ಇನ್ನೂ ಈ ಕುರಿತು ಖುದ್ದು ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ವರ್ಷದ ಆರಂಭದಲ್ಲಿ ನಮ್ಮ ನಡುವೆ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದಿದ್ದ ಭೇಟಿಯ ವೇಳೆಯಲ್ಲಿ ಪ್ರಸ್ತಾಪಿಸಲಾಗಿದ್ದ ವಿಚಾರಗಳ ಕುರಿತು ಮುಂದುವರೆದ ಚರ್ಚೆಯನ್ನು ನಾವಿಬ್ಬರು ನಡೆಸಿದ್ದೆವೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಯೋಗದ ಅಗಾಧ ಸಾಮರ್ಥ್ಯದ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದ್ದೇವೆ. ಈ ಎರಡೂ ಕ್ಷೇತ್ರಗಳಲ್ಲಿ ಅಮೆರಿಕದೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಮೋದಿ ತಮ್ಮ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಲಹೆಗಾರರಾಗಿ ಹಾಗೂ ಅವರ ಸರ್ಕಾರದಲ್ಲಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿ ಇಲಾನ್‌ ಮಸ್ಕ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ಅಲ್ಲದೆ ಮೋದಿ ಅವರೊಂದಿಗೆ ಮಾತುಕತೆಯಿಂದ ಸಂತಸಗೊಂಡಿರುವ ಸ್ಪೇಸ್‌ ಎಕ್ಸ್‌ ಮುಖ್ಯಸ್ಥ ಇಲಾನ್‌ ಮಸ್ಕ್‌, ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು ಗೌರವದ ವಿಚಾರವಾಗಿದೆ. ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವುದನ್ನು ನಾನು ಎದುರುನೋಡುತ್ತಿದ್ದೇನೆ ಎಂದು ಮೋದಿ ಮಾಡಿದ್ದ ಟ್ವಿಟ್‌ಗೆ ಮಸ್ಕ್‌ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಟಾರ್‌ ಲಿಂಕ್ ಶೀಘ್ರದಲ್ಲೇ ಭಾರತಕ್ಕೆ..

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖ್ಯ ಸಲಹೆಗಾರ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಭಾರತದಲ್ಲಿ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸಲು ಶೀಘ್ರದಲ್ಲೇ ಪರವಾನಗಿ ಪಡೆಯುವ ಸಾಧ್ಯತೆಯಿದೆ. ಕಂಪನಿಯ ಪ್ರತಿನಿಧಿಗಳು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಮಾಡಿ ದೇಶದಲ್ಲಿ ಭವಿಷ್ಯದ ಹೂಡಿಕೆ ಯೋಜನೆಗಳ ಕುರಿತು ಮಾತುಕತೆ ನಡೆಸಿದ್ದಾರೆ. ಈ ಕುರಿತು ಮಾಹಿತ ನೀಡಿರುವ ಅವರು, ಸ್ಟಾರ್‌ಲಿಂಕ್‌ನ ಉಪಾಧ್ಯಕ್ಷ ಚಾಡ್ ಗಿಬ್ಸ್ ಮತ್ತು ಹಿರಿಯ ನಿರ್ದೇಶಕ ರಯಾನ್ ಗುಡ್‌ನೈಟ್ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ. ಸ್ಟಾರ್‌ಲಿಂಕ್‌ನ ನಿಯೋಗವನ್ನು ಭೇಟಿಯಾಗಿದ್ದು, ತಮ್ಮ ಚರ್ಚೆಗಳು ಸ್ಟಾರ್‌ಲಿಂಕ್‌ನ ಅತ್ಯಾಧುನಿಕ ತಂತ್ರಜ್ಞಾನ ವೇದಿಕೆ, ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳು ಮತ್ತು ಭಾರತದಲ್ಲಿ ಭವಿಷ್ಯದ ಹೂಡಿಕೆ ಯೋಜನೆಗಳನ್ನು ಒಳಗೊಂಡಿವೆ ಎಂದು ಗೋಯಲ್‌ ತಮ್ಮ ಟ್ಟಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಸ್ಕ್‌ ಜಾಗರೂಕ ನಡೆ..!

ಸ್ಟಾರ್‌ಲಿಂಕ್ 2021 ರಿಂದ ಭಾರತದ ಉಪಗ್ರಹ ಸಂವಹನ ವಲಯವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ, ಆದರೆ ಭಾರತದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪರವಾನಗಿಯನ್ನು ಇನ್ನೂ ಪಡೆದಿಲ್ಲ. ಪ್ರಸ್ತುತ 125 ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪನಿಯು, ಭಾರತದಲ್ಲಿ ಉಪಗ್ರಹ ಸೇವೆಗಳನ್ನು ಒದಗಿಸಲು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಪರವಾನಗಿಯ ಅಗತ್ಯವಿದೆ. ಭಾರ್ತಿ ಗ್ರೂಪ್ ಬೆಂಬಲಿತ ಒನ್‌ವೆಬ್ ಮತ್ತು ಜಿಯೋ-ಎಸ್‌ಇಎಸ್ ಜಂಟಿ ಉದ್ಯಮವಾದ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್, ಸ್ಟಾರ್‌ಲಿಂಕ್ ಮತ್ತು ಅಮೆಜಾನ್‌ನ ಪ್ರಾಜೆಕ್ಟ್ ಕೈಪರ್ ಎರಡೂ ಕಂಪನಿಗಳಿಗೆ ಪರವಾನಗಿಗಳನ್ನು ನೀಡಲಾಗಿದ್ದರೂ, ಭಾರತೀಯ ಅಧಿಕಾರಿಗಳಿಂದ ಅನುಮೋದನೆಗಾಗಿ ಕಾಯುತ್ತಿವೆ. ಈ ಮಧ್ಯೆ, ಕಂಪನಿಗೆ ಪರವಾನಗಿ ನೀಡುವ ಮೊದಲು ಅವರು ಎಲ್ಲಾ ರೀತಿಯ ಜಾಗರೂಕತೆ ವಹಿಸಿಕೊಳ್ಳುತ್ತಿದ್ದಾರೆ ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಟೆಸ್ಲಾ ವಿರೋಧಿಸಿದ್ದ ಟ್ರಂಪ್..

ಇನ್ನೂ ಪ್ರಮುಖವಾಗಿ ಈ ವರ್ಷದ ಆರಂಭದಲ್ಲಿ ಅಮೆರಿಕಕ್ಕೆ ಮೋದಿ ಭೇಟಿ ನೀಡಿದ ಬಳಿಕ ಟ್ರಂಪ್‌ ಭಾರತದಲ್ಲಿ ಟೆಸ್ಲಾ ಕಾರ್ಖಾನೆಗೆ ವಿರೋಧ ವ್ಯಕ್ತಪಡಿಸಿದ್ದರು, ಈ ಕುರಿತು ಒಂದು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್‌, ಟೆಸ್ಲಾ ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಿದರೆ ಅದು ಭಾರತೀಯ ಸುಂಕಗಳನ್ನು ಬೈಪಾಸ್ ಮಾಡಬಹುದು. ಆದರೆ ಇದರಿಂದ ಅಮೆರಿಕಕ್ಕೆ ಅನ್ಯಾಯ’ವಾಗುತ್ತದೆ. ಅಲ್ಲದೆ ಹೆಚ್ಚಾಗಿ ಮಸ್ಕ್ ಭಾರತದ ಅಧಿಕ ಸುಂಕಗಳನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಭಾರತದವರು ಟಾಟಾ ಮೋಟಾರ್ಸ್‌ನಂತಹ ದೇಶೀಯ ತಯಾರಕರನ್ನು ರಕ್ಷಿಸುತ್ತಾರೆ ಎಂಬುವ ಆರೋಪವನ್ನು ಅಮೆರಿಕದ ಅಧ್ಯಕ್ಷ ಮಾಡಿದ್ದರು.​

ಅಲ್ಲದೆ ಎಲಾನ್ ಮಸ್ಕ್ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುವುದು ಅಸಾಧ್ಯ. ಜಗತ್ತಿನ ಪ್ರತಿಯೊಂದು ದೇಶವೂ ನಮ್ಮ ಲಾಭವನ್ನು ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಅವರು ಅದನ್ನು ಸುಂಕಗಳ ಮೂಲಕ ಪಡೆಯುತ್ತಾರೆ. ಉದಾಹರಣೆಗೆ, ಭಾರತದಲ್ಲಿ ಕಾರು ಮಾರಾಟ ಮಾಡುವುದು ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ. ಈಗ ಮಸ್ಕ್ ಅವರು ಭಾರತದಲ್ಲಿ ಕಾರ್ಖಾನೆ ನಿರ್ಮಿಸಿದರೆ ಪರವಾಗಿಲ್ಲ, ಆದರೆ ಅದು ನಮಗೆ ತುಂಬಾ ಅನ್ಯಾಯವಾಗುತ್ತದೆ ಎಂದು ಅಧ್ಯಕ್ಷ ಟ್ರಂಪ್‌ ಪ್ರತಿಪಾದಿಸಿದ್ದರು. ಆದರೆ ಇದೆಲ್ಲದರ ನಡುವೆ ತಮ್ಮ ನಾಯಕ ಟ್ರಂಪ್‌ ಅವರ ಮಾತನ್ನು ಮೀರಿ ಮಸ್ಕ್‌ ಭಾರತದಲ್ಲಿ ಟೆಸ್ಲಾ ಉದ್ಯಮಕ್ಕೆ ಕೈ ಹಾಕುತ್ತಿರುವುದು ಅಮೆರಿಕ ಅಧ್ಯಕ್ಷರಿಗೆ ಇನ್ನಷ್ಟು ಪಿತ್ತ ನೆತ್ತಿಗೇರುವಂತೆ ಮಾಡಬಹುದು.

- Advertisement -

Latest Posts

Don't Miss