News: ಚಿಕ್ಕನಾಯಕನಹಳ್ಳಿ ತಾಲ್ಲೂಕು, ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ವಿದ್ಯುತ್ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಯಾದಗಿರಿ ಜಿಲ್ಲೆಯ ಸವದತ್ತಿ ಮೂಲದ ಮುತ್ತು (25) ಶನಿವಾರ ದುರ್ಮರಣ ಹೊಂದಿದ್ದಾನೆ. ಮೃತ ವ್ಯಕ್ತಿಗೆ ವಿವಾಹವಾಗಿದ್ದು, 1 ವರ್ಷದ ಮಗುವಿದೆ.
ಕತ್ರಿಕೆಹಾಳ್ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ಲಾಂಪ್ ಕಟ್ಟಾಗಿ ಆಯತಪ್ಪಿ ಸಿಮೆಂಟ್ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಭಾರೀ ಪೆಟ್ಟು ಬಿದ್ದು ರಕ್ತಸ್ತ್ರಾವಗೊಂಡಿದ್ದ. ತಕ್ಷಣ ಚಿಕ್ಕನಾಯಕನಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುತ್ತು ಮೃತಪಟ್ಟಿದ್ದಾನೆ. ಮೃತದೇಹವನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಶವಗಾರದಲ್ಲಿ ಇರಿಸಲಾಗಿದೆ.
ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತೆಯೇ ಈ ದುರ್ಘಟನೆಯಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ಲೈನ್ ಮನ್‌ಗಳಿಗೆ ಹೆಲ್ಮೆಟ್, ಹ್ಯಾಂಡ್‌ಗ್ಲೋವ್ಸ್ ಮೊದಲಾದ ಸುರಕ್ಷತಾ ಸಾಧನಗಳನ್ನು ಧರಿಸಿ ಕೆಲಸ ಮಾಡಿಸಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ಒಬ್ಬ ಅಮಾಯಕ ಲೈನ್ ಮ್ಯಾನ್ ಪ್ರಾಣ ಕಳೆದುಕೊಂಡಿದ್ದಾನೆ. ಇಲಾಖೆ ಎಚ್ಚರಿಕೆ ತೆಗೆದುಕೊಳ್ಳಬೇಕು” ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.