ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಈ ಪ್ರವಾಸದ ವೇಳೆ ನಿಖಿಲ್ ಅವರು ಬೆಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ್ರು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ರೈತರ ಸಾಲಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿರುವ ನಿಖಿಲ್, ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸಿದೆ. ಇಷ್ಟಾದರೂ ಸಿಎಂ ಸಿದ್ದರಾಮಯ್ಯ, ಕೃಷ್ಣಾ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡುವುದು ಬಿಟ್ಟರೆ, ಬೇರೆ ಏನೂ ಮಾಡಿಲ್ಲ. ರಾಜ್ಯದಿಂದ ಕೃಷಿ ಸಚಿವರು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಕೃಷಿ ಸಚಿವರು ರೈತರ ಸಂಕಷ್ಟವನ್ನು ಆಲಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಒಂದೇ ಒಂದು ಪ್ರದೇಶಕ್ಕೂ, ಸಿಎಂ ಇದುವರೆಗೂ ಭೇಟಿ ನೀಡಿಲ್ಲ. ರಾಜ್ಯದ ಕೃಷಿ ಸಚಿವರಂತೂ ಅವರ ಮತಕ್ಷೇತ್ರ ಬಿಟ್ಟು ಹೊರಗೆ ಬಂದೇ ಇಲ್ಲ. ಕಲಬುರಗಿ ಜಿಲ್ಲೆಗಳನ್ನ ಕೃಷಿ ಸಚಿವರು ಮರತೇ ಬಿಟ್ಟಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ರೂ, ಕೃಷಿ ಸಚಿವರು ಭೇಟಿ ನೀಡಿಲ್ಲ.
ಜೆಡಿಎಸ್ ಪಕ್ಷಕ್ಕೆ ಅಧಿಕಾರ ಇರಲಿ, ಬಿಡಲಿ. ರೈತರ ಪರವಾಗಿ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ. ರಾಜ್ಯ ಸರ್ಕಾರ, ಕಲ್ಯಾಣ ಕರ್ನಾಟಕಕ್ಕೆ ಕೆಕೆಆರ್‌ಡಿಬಿ ವತಿಯಿಂದ 5 ಸಾವಿರ ಕೋಟಿ ಹಣ, ಅಭಿವೃದ್ಧಿ ಮಾಡಲು ಮೀಸಲಿಟ್ಟಿದ್ದೇವೆ ಎಂದು ಭಾಷಣ ಮಾಡುತ್ತಾರೆ. ಇಂತಹ ಸಮಯದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್‌ಗಳನ್ನು ನೀಡುವುದರ ಮೂಲಕ, ರೈತರ ಸಾಲದ ಹೊರೆಯನ್ನ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
NDRF ನಿಯಮ ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂಬ ಪ್ರಿಯಾಂಕಾ ಖರ್ಗೆ ಹೇಳಿಕೆಗೆ, ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು. ಈ ವಿಚಾರದಲ್ಲಿ ಆ ಸರ್ಕಾರ, ಈ ಸರ್ಕಾರ ಎನ್ನದೇ, ಹಾನಿಗೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕಿದೆ. ಈ ದಿಕ್ಕಿನಲ್ಲಿ ಎಲ್ಲರೂ ಒಂದಾಗಿ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.