Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ. ಹೀಗೆ ಬದುಕುತ್ತ ಬದುಕುತ್ತ, ತಮ್ಮ ಜೀವನದ ಖಷಿಯನ್ನೇ ಮರೆಯುತ್ತಾರೆ. ಆದರೆ ನೀವು ಎಷ್ಟೇ ಉತ್ತಮರಾಗಿರಲು ಪ್ರಯತ್ನಿಸಿದರೂ ಜನ ನಿಮ್ಮ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ನಾವಿಂದು ಶಿವ ಪಾರ್ವತಿ ಕಥೆಯನ್ನೇ ಉದಾಹರಣೆಯಾಗಿ ನೋಡೋಣ..
ಒಮ್ಮೆ ಶಿವ ಮತ್ತು ಪಾರ್ವತಿ ಮಾನವ ವೇಷದಲ್ಲಿ ನಂದಿಯ ಮೇಲೆ ಕುಳಿತು ಪ್ರಪಂಚ ಪರ್ಯಟನೆಗೆ ಹೋದರಂತೆ. ಆಗ ಜನ ಅವರನ್ನು ನೋಡಿ, ಛೇ ಪಾಪಾ ಆ ನಂದಿಯ ಸ್ಥಿತಿ ನೋಡು… ಆ ಪತಿ-ಪತ್ನಿಯ ಭಾರ ತಾಳಲಾರದೇ ಎಷ್ಟು ಪಾಡು ಪಡುತ್ತಿದ್ದಾನೆ. ಮೂಕ ಪ್ರಾಣಿಗೆ ಅದೆಷ್ಟು ಚಿತ್ರಹಿಂಸೆ ನೀಡುತ್ತಿದ್ದಾರೆ. ಪಾಪಾ ಇಬ್ಬರ ಭಾರ ಅದು ಹೇಗೆ ತಡೆಯುತ್ತದೋ ಏನೋ ಎಂದು ಹೇಳುತ್ತಾರೆ.
ಆಗ ಈ ಮಾತು ಕೇಳಿ ಪಾರ್ವತಿ ನಂದಿಯಿಂದ ಇಳಿದು, ಶಿವ ಮಾತ್ರ ನಂದಿಯ ಮೇಲೆ ಸಂಚರಿಸುತ್ತಾನೆ. ಆಗ ಜನ, ಎಂಥಾ ಗಂಡ ಇವಾ. ಪತ್ನಿಯನ್ನು ನಡೆಸಿ, ತಾನು ಮಾತ್ರ ನಂದಿಯ ಮೇಲೆ ಕುಳಿತು ಹೋಗುತ್ತಿದ್ದಾನೆ. ಪಾಪ ಆಕೆ, ನಡೆದು ನಡೆದು ಅದೆಷ್ಟು ಬಸವಳಿದ್ದಾಳೋ ಏನೋ ಎನ್ನುತ್ತಾರೆ..
ಆಗ ಶಿವ ಪಾರ್ವತಿಯನ್ನು ನಂದಿಯ ಮೇಲೆ ಕುಳ್ಳಿರಿಸಿ, ತಾನು ನಡೆಯುತ್ತ ಹೋಗುತ್ತಾನೆ. ಆಗ ಜನ, ಎಂಥಾ ಪತ್ನಿ ಈಕೆ, ಪತಿಯನ್ನು ನಡೆಸಿ, ತಾನು ನಂದಿಯ ಮೇಲೆ ಆರಾಮವಾಗಿ ಕುಳಿತಿದ್ದಾಳೆ. ನಾವೆಲ್ಲ ಪತಿಯೇ ಪರಮೇಶ್ವರ ಎನ್ನುತ್ತೇವೆ. ಅಂಥದ್ರಲ್ಲಿ ಪತಿಯನ್ನು ಆಳಿನ ರೀತಿ ನಡೆಸಿಕ“ಳ್ತಿದ್ದಾಳೆ ಶಿವ ಶಿವಾ ಅಂತಾರೆ..
ಆಗ ಶಿವ-ಪಾರ್ವತಿ ಇಬ್ಬರೂ ಕೆಳಗಿಳಿದು, ನಡೆದು ಹೋಗುತ್ತಿರುತ್ತಾರೆ. ಆಗ ಜನ, ಎಂಥ ಮೂರ್ಖರಪ್ಪಾ ಇವರು. ಇವರ ಬಳಿ ವಾಹನವಿದ್ದೂ ಪ್ರಯೋಜನವಿಲ್ಲ. ಆ ನಂದಿ ಎಷ್ಟು ಆರಾಮವಾಗಿ ಬರುತ್ತಿದ್ದಾನೆ. ಅವನ ಮೇಲೆ ಹತ್ತಿ ಕುಳಿತು ಹೋಗಿದ್ದರೆ, ಇಷ್ಟ“ತ್ತಿಗಾಗಲೇ, ತಲುಪುವ ಜಾಗ ತಲುಪಿರುತ್ತಿದ್ದರೇನೋ ಎನ್ನುತ್ತಾರೆ.
ಈ ರೀತಿ ಅವರೇನು ಮಾಡಿದ್ರೂ, ಜನ ಹೆಸರಿಡುತ್ತಿದ್ದರು. ಇದು ಕಥೆ. ಆದರೆ ನಿಜ ಜೀವನದಲ್ಲೂ ಇದೇ ರೀತಿ ಜನ, ನೀವು ಏನೇ ಮಾಡಿದ್ರೂ ಹೆಸರಿಡುತ್ತಾರೆ. ಮಾತನಾಡುತ್ತಾರೆ. ಹಾಗಾಗಿ ನಿಮ್ಮ ಮನಸ್ಸಿಗೆ ಉತ್ತಮ ಅನ್ನಿಸಿದ್ದನ್ನು ನೀವು ಮಾಡಬೇಕು. ಬೇರೆಯವರು ಏನಂತಾರೋ ಅಂತಾ ಕುಳಿತರೆ, ನಿಮ್ಮ ಜೀವನವೇ ಕಳೆದು ಹೋಗುತ್ತದೆ.




