Political News: ರಾಜ್ಯ ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನು ಕಂಡು ಯೋಜನೆಗಳನ್ನು ಘೋಷಿಸಬೇಕು. ಇಲ್ಲವಾದಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಹುದು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನಕಾಯಿ ವ್ಯಂಗ್ಯವಾಡಿದ್ದು, ಹೋದಲ್ಲೆಲ್ಲಾ ಕೋಟಿ ಕೋಟಿ ಗಿಮಿಕ್ ಘೋಷಣೆ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಅವರ ಬೋಗಸ್ ಪ್ರಚಾರಕ್ಕೆ ಹಣಕಾಸು ಇಲಾಖೆಯೇ ಸರಿಯಾದ ಕಪಾಳಮೋಕ್ಷ ಮಾಡಿದೆ ಎಂದು ಜರಿದಿದ್ದಾರೆ.
”ಜೇಬಲ್ಲಿ ಕಾಸಿಲ್ಲ, ಶೋಕಿಗೇನೂ ಕೊರತೆಯಿಲ್ಲ” ಎನ್ನುವಂತೆ, ಖಜಾನೆಯಲ್ಲಿ ಕಾಸಿದೆಯೋ ಇಲ್ಲವೋ ಎಂಬುದರ ಕನಿಷ್ಠ ಅರಿವೂ ಇಲ್ಲದೆ, ಹೋದಲ್ಲೆಲ್ಲಾ ಬೊಗಳೆ ಯೋಜನೆಗಳನ್ನು ಘೋಷಿಸುತ್ತಿರುವ ಇಂತಹ ಆಡಳಿತಗಾರರನ್ನು ಕಂಡು ಇಡೀ ರಾಜ್ಯವೇ ನಗುತ್ತಿದೆ! ಎಂದು ಮಹೇಶ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ನಿಜವಾದ ಆಡಳಿತ ನಡೆಸುವುದನ್ನು ಬಿಟ್ಟು, ಹೋದಲ್ಲೆಲ್ಲಾ ಬಾಯಿಗೆ ಬಂದಂತೆ ಕೋಟ್ಯಂತರ ರೂಪಾಯಿಗಳ ಯೋಜನೆಗಳನ್ನು ಘೋಷಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ನಿಜ ಬಣ್ಣ ಈಗ ಸಂಪೂರ್ಣವಾಗಿ ಬೆತ್ತಲಾಗಿದೆ. ರಾಜ್ಯ ಸರ್ಕಾರವು ಸಾಲ ಪಡೆಯುವ ಗರಿಷ್ಠ ಮಿತಿಯನ್ನೂ ಈಗಾಗಲೇ ಮುಟ್ಟಿದ್ದು, ಬೊಕ್ಕಸದಲ್ಲಿ ಬಿಡಿಕಾಸು ಇಲ್ಲದಿದ್ದರೂ ‘ಕೋಟಿ ಕೋಟಿ ಅಭಿವೃದ್ಧಿ’ ಎಂದು ಸುಳ್ಳು ಭರವಸೆ ನೀಡುತ್ತಿದ್ದ ಮುಖ್ಯಮಂತ್ರಿಗಳ ಬೋಗಸ್ ಪ್ರಚಾರಕ್ಕೆ ಈಗ ಹಣಕಾಸು ಇಲಾಖೆಯೇ ರೆಡ್ ಸಿಗ್ನಲ್ ನೀಡಿದೆ.
ಮತ್ತೊಂದೆಡೆ ಲೋಕೋಪಯೋಗಿ, ಜಲಸಂಪನ್ಮೂಲ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 36,136 ಕೋಟಿ ರೂಪಾಯಿಗಳ ಬಿಲ್ಗಳು ಪೆಂಡಿಂಗ್ ಬಿದ್ದಿದ್ದು, ಸುಮಾರು ಎರಡು ಲಕ್ಷ ಕೋಟಿ ವೆಚ್ಚದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಪರಿಸ್ಥಿತಿ ಹೀಗಿರುವಾಗ, ಮತ್ತೆ 10,000 ಕೋಟಿ ರೂಪಾಯಿ ವೆಚ್ಚದ ಹೊಸ ಗ್ರಾಮೀಣ ರಸ್ತೆ ಯೋಜನೆ ಜಾರಿಗೆ ತರುತ್ತೇವೆ ಎನ್ನುವುದು ಬರಿ ಬೋಗಸ್ ತಂತ್ರ ಮತ್ತು ಬೊಗಳೆ ಪ್ರಚಾರ ಅಷ್ಟೇ ಆಗಿದೆ. ಸರ್ಕಾರದ ಬಳಿ ಯೋಜನೆಗಳಿಗೆ ಹಣವಿಲ್ಲದೆ ಸಾರಿಗೆ ನಿಗಮಗಳು, ಎಸ್ಕಾಂಗಳು ಹಾಗೂ ನೀರಾವರಿ ಮಂಡಳಿಯ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡಲಾಗುತ್ತಿಲ್ಲ, ಜೊತೆಗೆ ವೃದ್ಧರು ಮತ್ತು ಅಸಹಾಯಕರಿಗೆ ಮಾಸಿಕ ಪಿಂಚಣಿ ಪಾವತಿಸಲೂ ಸರ್ಕಾರ ಕೈಚೆಲ್ಲಿ ಕುಳಿತಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ತೀವ್ರ ಬರಗಾಲದಿಂದ ಕಂಗೆಟ್ಟಿರುವ ಅನ್ನದಾತ ರೈತರ ಕೃಷಿ ಪಂಪ್ಸೆಟ್ಗಳಿಗೆ ನೀಡಬೇಕಾದ 4-5 ಸಾವಿರ ಕೋಟಿ ರೂಪಾಯಿ ಸಹಾಯಧನವನ್ನೂ ನೀಡುವುದಕ್ಕೆ ಈ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಹಣಕಾಸಿನ ಯಾವುದೇ ಮೂಲವೇ ಇಲ್ಲದೆ ಹೋದಲ್ಲೆಲ್ಲಾ ಬೋಗಸ್ ಘೋಷಣೆಗಳನ್ನು ಮಾಡುತ್ತಾ ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯವನ್ನು ಸಂಪೂರ್ಣ ಆರ್ಥಿಕ ದಿವಾಳಿತನಕ್ಕೆ ತಳ್ಳಿದೆ. ಸರ್ಕಾರ ತಕ್ಷಣವೇ ತನ್ನ ಶೋಕಿ ಪ್ರಚಾರವನ್ನು ನಿಲ್ಲಿಸಿ, ರಾಜ್ಯದ ನಿಜವಾದ ಆರ್ಥಿಕ ಪರಿಸ್ಥಿತಿಯ ಕುರಿತು ‘ಶ್ವೇತಪತ್ರ’ ಹೊರಡಿಸಬೇಕು ಎಂದು ಮಹೇಶ್ ಟೆಂಗಿನಕಾಯಿ ಆಗ್ರಹಿಸಿದ್ದಾರೆ.




