ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಲವು ಗ್ರಾಮಗಳಿಗೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ, ಇದುವರೆಗೂ 1 ಹನಿ ನೀರೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡಿದ್ರೂ, ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
ಕಳ್ಳಂಬೆಳ್ಳ ಕೆರೆಯಿಂದ 22 ಗ್ರಾಮಗಳಿಗೆ 6.10 ಕೋಟಿ ವೆಚ್ಚದಲ್ಲಿ, ಯಲಿಯೂರು ಕೆರೆಯಿಂದ 23 ಗ್ರಾಮಗಳಿಗೆ 4.60 ಕೋಟಿ ವೆಚ್ಚದಲ್ಲಿ, ಶಿರಾದ ದೊಡ್ಡ ಕೆರೆಯಿಂದ ತಾವರೆಕೆರೆ ಸೇರಿದಂತೆ 64 ಗ್ರಾಮಗಳಿಗೆ, 15.35 ಕೋಟಿ ವೆಚ್ಚದಲ್ಲಿ, ಒಟ್ಟು 109 ಗ್ರಾಮಗಳಿಗೆ 26 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಕಾಮಗಾರಿ ಪೂರ್ಣಗೊಂಡು 2016ರಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ರು. ಶಿರಾ ತಾಲೂಕಿನಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು, ಸಾವಿರ ಅಡಿ ಕೊಳೆವೆ ಬಾವಿ ಕೊರೆದರೂ ಸೀರು ಸಿಕ್ತಿಲ್ಲ. ನೀರು ಸಿಕ್ಕರೂ ಫ್ಲೋರೈಡ್‌ನಿಂದ ಕುಡಿಯಲು ಯೋಗ್ಯವಾಗಿಲ್ಲ. ಟಿ.ಬಿ. ಜಯಚಂದ್ರ ಅವರು ಸಚಿವರಾಗಿದ್ದಾಗ, ಹೆಚ್ಚು ಅನುದಾನ ತಂದು ಯೋಜನೆ ಪೂರ್ಣಗೊಳಿಸಿದ್ರು. ಟಿ.ಬಿ. ಜಯಚಂದ್ರ ಚನಾವಣೆಯಲ್ಲಿ ಸೋತ ಬಳಿಕ, ಈ ಯೋಜನೆ ಮೂಲೆಗುಂಪಾಯಿತು. ಪರಿಣಾಮ 9 ವರ್ಷ ಕಳೆದರೂ ನೀರು ಬಿಟ್ಟಿಲ್ಲ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿರುವ ಯಂತ್ರಗಳು, ಬಳಕೆಯಾಗದೇ ತುಕ್ಕು ಹಿಡಿಯುತ್ತಿವೆ. ಕೆಲ ಕಿಡಿಗೇಡಿಗಳು ಕೆಲ ಯಂತ್ರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಅಧಿಕಾರಿಗಳು ಮಾತ್ರ, ಹೊಸ ಕಾಮಗಾರಿಗಳ ಬಗ್ಗೆ ಉತ್ಸಾಹ ತೋರುತ್ತಿದ್ದಾರೆಯೇ ಹೊರತು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಲು, ಕ್ರಮ ಕೈಗೊಳ್ಳುತ್ತಿಲ್ಲ. ಒಟ್ನಲ್ಲಿ ದೇವರು ವರ ಕೊಟ್ರೂ, ಪೂಜಾರಿ ಕೊಡ್ತಿಲ್ಲ ಅನ್ನುವಂತಾಗಿದೆ ಶಿರಾ ಜನರ ಪರಿಸ್ಥಿತಿ