ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೊಡ್ಡ ತಿರುವು ಕಂಡುಬಂದಿದೆ. ಸ್ಪರ್ಧೆಗೆ ಇಳಿದಿದ್ದ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರ ಕೇವಲ ₹200 ಶುಲ್ಕ ಪಾವತಿಸದ ಕಾರಣ ತಿರಸ್ಕೃತಗೊಂಡಿದೆ. ಇದರ ಪರಿಣಾಮವಾಗಿ ಅವರ ಪ್ರತಿಸ್ಪರ್ಧಿ ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಅವಿರೋಧವಾಗಿ ಕೆಎಸ್ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಶಾಂತಕುಮಾರ್ ಅವರು ಮೈಸೂರು ದಿ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದು, ಕೆಎಸ್ಸಿಎ ರಾಜಕೀಯದಲ್ಲಿ ‘ಟೀಮ್ ಬ್ರಿಜೇಶ್ ಪಟೇಲ್’ ಶಕ್ತಿಯ ಭಾಗವಾಗಿದ್ದರು. ಆದರೆ ನಾಮಪತ್ರ ಪರಿಶೀಲನೆಯ ವೇಳೆ ₹200 ಚಂದಾ ಶುಲ್ಕ ಪಾವತಿ ಇಲ್ಲದಿರುವುದು ಪತ್ತೆಯಾಗಿದ್ದು, ಇದೇ ತಾಂತ್ರಿಕ ಕಾರಣಕ್ಕೆ ಅವರ ಅರ್ಜಿ ಅಸಿಂಧುವಾಗಿದೆ ಎಂದು ಕೆಎಸ್ಸಿಎ ಮೂಲಗಳು ತಿಳಿಸಿವೆ. ಇದರಿಂದ ಟೀಂ ಗೇಮ್ ಚೇಂಜರ್ಸ್ನ ಅಭ್ಯರ್ಥಿ ವೆಂಕಟೇಶ್ ಪ್ರಸಾದ್ ಅವರಿಗೆ ನೇರವಾಗಿ ಹಾದಿ ಸುಗಮವಾಗಿದೆ.
ಪ್ರಸಾದ್ ಅವರಿಗೆ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಸೇರಿದಂತೆ ಅನೇಕ ಹಿರಿಯ ಕ್ರಿಕೆಟಿಗರ ಬೆಂಬಲ ಲಭಿಸಿದೆ. ಈ ಹಿಂದೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದಾಗ, ವೆಂಕಟೇಶ್ ಪ್ರಸಾದ್ ಕೆಎಸ್ಸಿಎ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಚುನಾವಣೆಯ ವೇಳೆ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ವಿನಯ್ ಮೃತ್ಯುಂಜಯ ಅವರ ನಾಮಪತ್ರವೂ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿತ್ತು. ಇದರಿಂದ ಗೇಮ್ ಚೇಂಜರ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಮಾನ್ಯ ನಾಮನಿರ್ದೇಶಿತ ಪಟ್ಟಿಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಮತ್ತು ಕಲ್ಪನಾ ವೆಂಕಟಾಚಾರ್ ಹೆಸರುಗಳಿದ್ದು, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ಹಲವಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಮಾತನಾಡಿದ ಪ್ರಸಾದ್—ಬಿಸಿಸಿಐ ನೀಡುವ ಕೋಟ್ಯಾಂತರ ರೂ. ಹಣವನ್ನು ಕ್ರಿಕೆಟ್ ಅಭಿವೃದ್ಧಿಗೆ ಬಳಸಬೇಕು, ಚಿನ್ನಸ್ವಾಮಿ ಕ್ರೀಡಾಂಗಣದ ಅಂತರಾಷ್ಟ್ರೀಯ ವೈಭವ ಮರುಸ್ಥಾಪಿಸಬೇಕು, ಹಾಗೂ ಕರ್ನಾಟಕ ಕ್ರಿಕೆಟ್ಗೆ ಕಳೆದುಹೋದ ಗೌರವವನ್ನು ಮರಳಿ ತರುವುದು ನಮ್ಮ ಆದ್ಯತೆ ಎಂದು ಘೋಷಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

