Friday, July 11, 2025

Latest Posts

ಈ ಅವಧಿಗೆ ಡಿಕೆಶಿ ಸಿಎಂ ಆಗ್ತಾರೆ! : ನೊಣವಿನಕೆರೆ ಶ್ರೀಗಳ ಸ್ಫೋಟಕ ಹೇಳಿಕೆ

- Advertisement -

ದಾವಣಗೆರೆ : ರಾಜ್ಯದಲ್ಲಿ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನನಗೆ ಶಾಸಕರ ಬೆಂಬಲವಿದೆ. ಡಿಕೆಶಿ ಅವರಿಗೆ ಹೆಚ್ಚಿನ ಶಾಸಕರ ಬಲವಿಲ್ಲ ಎಂದು ಹೇಳುವ ಮೂಲಕ ಹೈಕಮಾಂಡ್ ನಾಯಕರಿಗೂ ಖಡಕ್ ಸಂದೇಶ ರವಾನಿಸಿದ್ದಾರೆ. ಆದರೆ ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ಈ ಅವಧಿಯಲ್ಲಿಯೇ ಸಿಎಂ ಆಗುತ್ತಾರೆ ಎಂದು ಸ್ವಾಮೀಜಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶಿವಯೋಗಿಶ್ವರ ಶ್ರೀ, ಮಠದ, ರೈತರು ಹಾಗೂ ಜನರ ಸಂಕಲ್ಪದ ಮೇರೆಗೆಯೇ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುತ್ತಾರೆ. ರಾಜ್ಯ ಸರ್ಕಾರದ ಕೆಲಸದಲ್ಲಿಯೂ ಅವರು ಮುಂದೆ ಇದ್ದಾರೆ. ಅವರ ಹೋರಾಟಕ್ಕೆ ಸಾಕ್ಷಿಯಾಗಿದ್ದೀರಿ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್‌ ಅವರಿಗೆ ಜನಸೇವೆ ಮಾಡಲು ಅವಕಾಶ ಸಿಗಲಿ, ನಾವು ಆಶೀರ್ವಾದ ಮಾಡುತ್ತೇವೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಇನ್ನೂ ಈ ಹಿಂದೆಯೂ ಇದೇ ನೊಣವಿನಕರೆ ಶ್ರೀಗಳು ರೈತರು, ವರ್ತಕರು ಹಾಗೂ ಸಮಸ್ತ ಭಕ್ತರ ಸಂಕಲ್ಪದಂತೆ, ಆಸೆಯಂತೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಆದರೆ ಎಷ್ಟು ದಿನದಲ್ಲಿ ಅಂತ ಹೇಳಲು ಸಾಧ್ಯವಿಲ್ಲ. ನಾನೂ ಹಾಗೂ ಡಿಕೆ ಶಿವಕುಮಾರ್ ಹೋಗಿ ಪವಿತ್ರ ಗಂಗಾ ಸ್ನಾನವನ್ನು ಮಾಡಿದ್ದೇವೆ. ಅಲ್ಲಿ ಸಂಕಲ್ಪವನ್ನೂ ಮಾಡಿದ್ದೇವೆ ಎಂದು ಹೇಳುವ ಮೂಲಕ ಡಿಕೆಶಿ ಪರ ಬ್ಯಾಟ್‌ ಬೀಸಿದ್ದರು.

ಅಲ್ಲದೆ ಶ್ರೀ ಮಠದ ಆಶೀರ್ವಾದದಿಂದ, ಯೋಗ್ಯ ವ್ಯಕ್ತಿ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ. ಈಗಲೇ ರಾಜಕಾರಣದಲ್ಲಿ ಪ್ರತಿನಿತ್ಯ ಚರ್ಚೆ ನಡೆಯುತ್ತಿದೆ. ಎಲ್ಲಾ ಭಗವಂತರ ಆಶೀರ್ವಾದ ಸಿಗಲಿ, ಎಲ್ಲರೂ ಹೇಳುವಂತೆ, ಎಲ್ಲರ ಸಂಕಲ್ಪದಂತೆ ಬಡವರ, ರೈತರ ಪ್ರೀತಿ ವಿಶ್ವಾಸ ಗಳಿಸಿ ಉತ್ತಮ ವ್ಯಕ್ತಿಯಾಗಿ ಬಾಳಲಿ ಎಂದು ಆಶೀರ್ವಾದ ಮಾಡುವುದಾಗಿ ಹೇಳಿದ್ದರು. ರಾಜ ಪ್ರತ್ಯಕ್ಷ ದೇವನಂತೆ ಡಿಕೆ ಶಿವಕುಮಾರ್ ಬಾಳಲಿ ಎಂದು ಹರಸಿದ್ದರು. ಆದರೆ ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿ ಶ್ರೀಗಳು ಡಿಕೆ ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದಿರುವುದು ರಾಜಕೀಯದಲ್ಲಿ ನಾನಾ ಚರ್ಚೆಗಳಿಗೆ ಹಾಗೂ ಗೊಂದಲಗಳಿಗೆ ಕಾರಣವಾಗಿದೆ.

ಇನ್ನೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಈ ಮೊದಲಿನಿಂದಲೂ ಇದೇ ನೊಣವಿನಕೆರೆಯ ಮಠದ ಪರಮ ಭಕ್ತರಾಗಿದ್ದಾರೆ. ತಾವು ಯಾವುದೇ ಶುಭ ಕಾರ್ಯ ಹಾಗೂ ಇನ್ಯಾವುದೇ ಒಳ್ಳೆಯ ನಿರ್ಧಾರ ಪಡೆಯುವ ಮೊದಲು ಈ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ.

ಕಳೆದ ಹಲವು ವರ್ಷಗಳಿಂದಲೂ ಡಿಕೆ ಶಿವಕುಮಾರ್‌ ಅವರ ರಾಜಕೀಯದ ಪ್ರತಿ ಹೆಜ್ಜೆಯೂ ಇದೇ ಮಠದಲ್ಲಿ ನಿರ್ಧಾರವಾಗುತ್ತದೆ. ಅಷ್ಟರ ಮಟ್ಟಿಗೆ ಈ ಮಠದೊಂದಿಗೆ ಡಿಕೆಶಿ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್‌ ಅವರ ಮೇಲೆ ಶ್ರೀಗಳ ಆಶೀರ್ವಾದವಿದೆ. ಆದರೆ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಸ್ವಾಮೀಜಿಗಳ ಈ ಹೇಳಿಕೆಯು ರಾಜ್ಯಾ ರಾಜಕಾರಣದ ಮೇಲೆ ಆದರಲ್ಲೂ ಕಾಂಗ್ರೆಸ್‌ ಪಕ್ಷದಲ್ಲಿ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಾಯಕತ್ವ ಬದಲಾವಣೆಯ ಕುರಿತು ಇದುವರೆಗೂ ರಾಜ್ಯದಲಿಯೇ ಹೇಳಿಕೆಗಳು ಹೊರಬರುತ್ತಿವೆ. ಶಾಸಕರು ಹಾಗೂ ಸಚಿವರ ನಡುವೆಯೇ ಈ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದರೆ ಪವರ್‌ ಶೇರಿಂಗ್‌ ವಿಚಾರದಲ್ಲಿ ಇದುವರಗೂ ದಿಲ್ಲಿ ನಾಯಕರೂ ತುಟಿ ಬಿಚ್ಚಿಲ್ಲ. ಇವರು ಮುಂದಿನ ಸಿಎಂ ಆಗುತ್ತಾರೆ, ಅಥವಾ ಸಿದ್ದರಾಮಯ್ಯ ಅವರೇ ಅವಧಿ ಪೂರ್ಣಗೊಳಿಸಲಿದ್ದಾರೆ ಎಂಬ ಬಗ್ಗೆಯೂ ಯಾವುದೇ ಸ್ಪಷ್ಟ ನಿಲುವಿಗೂ ಬಂದಿಲ್ಲ. ಆದರೆ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿನ ರಾಜಕೀಯ ಬೆಳವಣಿಗೆಗಳು ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ನಡೆಯುತ್ತಿದ್ದ ಕುರ್ಚಿ ಕಲಹ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್‌ ಆಗಿವೆ. ಅಲ್ಲಿಯೂ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಎಂದು ಹೇಳಿರುವುದನ್ನು ಹೈಕಮಾಂಡ್‌ ಯಾವ ರೀತಿಯಾಗಿ ನೋಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

 

- Advertisement -

Latest Posts

Don't Miss