ಇತ್ತೀಚಿಗೆ ಶಾಲಾ ಮಕ್ಕಳಲ್ಲಿ ನಡೆಸಿದ ಸಂಶೋಧನೆಯೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಾದಕ ವಸ್ತು ಬಳಕೆಗೆ ಕಡಿವಾಣ ಹಾಕಲು ಸರ್ಕಾರಗಳ ನಿರಂತರ ಪ್ರಯತ್ನಗಳ ನಡುವೆಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 11 ವರ್ಷದೊಳಗಿನ ಮಕ್ಕಳು ಕೂಡಾ ಮಾದಕ ವಸ್ತು ವ್ಯಸನಿಗಳಾಗಿದ್ದಾರೆ.
ಇದು ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಕಡಿಮೆ ವಯೋಮಾನದಲ್ಲೇ ಮಕ್ಕಳು ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಎಂದು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ. ಇದು ತಿಳಿಸಿರುವ ಮಾಹಿತಿ ಪ್ರಕಾರ, ಶೇ.15 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಸಂಶೋಧನೆ ಕಂಡುಹಿಡಿದಿದೆ. ಇನ್ನು ಹೆಚ್ಚುವರಿಯಾಗಿ, ಶೇ. 10.3 ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಇದನ್ನು ಬಳಸಿದ್ದು, ಶೇ. 7.2 ರಷ್ಟು ಮಕ್ಕಳು ಇದನ್ನು ಕಳೆದ ತಿಂಗಳು ಬಳಸಿದ್ದಾರೆ ಎಂದು ಹೇಳಿದೆ.
ಈ ಸಮೀಕ್ಷೆ ದೇಶದ 10 ನಗರಗಳಲ್ಲಿ ನಡೆದಿದ್ದು ನಮ್ಮ ಬೆಂಗಳೂರು ಕೂಡ ಈ ಲಿಸ್ಟ್ ನಲ್ಲಿದೆ. ಈ ಅಧ್ಯಯನವು ದೆಹಲಿ, ಬೆಂಗಳೂರು, ಮುಂಬೈ, ಚಂಡೀಗಢ, ಹೈದರಾಬಾದ್, ಲಕ್ನೋ, ಇಂಫಾಲ್, ಜಮ್ಮು, ದಿಬ್ರುಗಢ ಮತ್ತು ರಾಂಚಿಯಲ್ಲಿ ನಡೆದಿದ್ದು, ಸುಮಾರು 14.7 ವರ್ಷ ವಯಸ್ಸಿನ 5,920 ವಿದ್ಯಾರ್ಥಿಗಳನ್ನು ಇತ್ತೀಚೆಗೆ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಈ ವೇಳೆ ಪ್ರತಿ 7 ವಿದ್ಯಾರ್ಥಿಗಳಲ್ಲಿ ಓರ್ವ ತಂಬಾಕು, ಮದ್ಯ, ಗಾಂಜಾ ಸೇರಿದಂತೆ ಕನಿಷ್ಠ ಯಾವುದಾದರೂ ಒಂದು ಮಾದಕ ದ್ರವ್ಯ ಸೇವಿಸುತ್ತಿರುವುದು ಕಂಡುಬಂದಿದೆ ಎಂದು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದಲ್ಲಿ ವರದಿ ಹೇಳಿದೆ. ದೆಹಲಿ ಏಮ್ಸ್‌ನ ಡಾ. ಅಂಜು ಧವನ್ ನೇತೃತ್ವದ ತಂಡ ಬೆಂಗಳೂರು ಸೇರಿ 10 ನಗರಗಳ ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ಈ ಸಮೀಕ್ಷೆ ನಡೆಸಿತ್ತು.
ವಿದ್ಯಾರ್ಥಿಗಳು ಕಡಿಮೆ ವಯಸ್ಸಿನಲ್ಲಿಯೇ ಮಾದಕ ವ್ಯಸನ ಸೇವನೆಯತ್ತ ಮುಖ ಮಾಡುತ್ತಿರುವುದಕ್ಕೆ ಗೆಳೆಯರ ಮತ್ತು ಕುಟುಂಬದ ಪ್ರಭಾವವೂ ಕಾರಣ ಎನ್ನಲಾಗಿದೆ. ಶೇ.40ರಷ್ಟು ಮಕ್ಕಳು ತಮ್ಮ ಮನೆ ಮಂದಿಯ ತಂಬಾಕು, ಮದ್ಯಪಾನ ಸೇವನೆ ತಾವು ಅಭ್ಯಾಸ ಮಾಡಿದ್ದಾಗಿ ಸಮೀಕ್ಷಾ ವರದಿ ಹೇಳಿದೆ.
ವರದಿ : ಲಾವಣ್ಯ ಅನಿಗೋಳ




