ಬೆಂಗಳೂರಿಗರು ಬೈಕ್ ಟ್ಯಾಕ್ಸಿ ಬ್ಯಾನ್ ಆಯ್ತು ಅನ್ನೋ ಬೇಸರದಲ್ಲಿದ್ದಾರೆ. ಆಟೋ ಮೀಟರ್ ದರ ಸೇರಿ ಒಂದಲ್ಲ ಒಂದು ಬೆಲೆ ಏರಿಕೆಯಿಂದ ಸುಸ್ತಾಗುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಂತೂ ಸಾರಿಗೆ ದುಬಾರಿಯಾಗಿದೆ. ಇದೀಗ ಓಲಾ-ಊಬರ್ ಬಳಸುವವರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ದೇಶದಾದ್ಯಂತ ಶೀಘ್ರವೇ ರ್ಯಾಪಿಡೋ, ಓಲಾ ಹಾಗೂ ಊಬರ್ ನಂತಹ ಕ್ಯಾಬ್ ಸೇವೆಗಳು ದುಬಾರಿ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಪ್ರಯಾಣಿಕರು ಪೀಕ್ ಅವರ್ನಲ್ಲಿ ಇನ್ಮುಂದೆ ಡಬಲ್ ಚಾರ್ಚ್ ಕೊಡಬೇಕಾಗುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೂ ಅನುಮತಿ ನೀಡಿದೆ.
ಈಗಾಗಲೇ ಸಾರ್ವಜನಿಕ ಸಾರಿಗೆಗಳಾದ ಮೆಟ್ರೋ ಹಾಗೂ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ವಿಪರೀತ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಪೀಕ್ ಅವರ್ಗಳಲ್ಲಿ ಮಾತ್ರ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತಿತ್ತು. ಆದರೆ ಈಗ ಮಧ್ಯಾಹ್ನದ ಸಮಯದಲ್ಲೂ ಕೆಲವು ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗಳಾಗುತ್ತಿದೆ. ಒಂದು ಕಡೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾದರೆ ಮತ್ತೊಂದು ಕಡೆ ಪ್ರಯಾಣಕ್ಕೆ ಹೆಚ್ಚು ದುಡ್ಡು ಖರ್ಚಾಗುತ್ತಿರುವುದು ಜನರಿಗೆ ಮತ್ತಷ್ಟು ಸಂಕಷ್ಟ ತಂದಿದೆ.
ಬೈಕ್ ಟ್ಯಾಕ್ಸಿಗಳ ಸೇವೆ ಕೆಲವೊಂದು ಕಾನೂನಾತ್ಮಕ ಸಮಸ್ಯೆಗಳು ಇತ್ತು. ಅಲ್ಲದೇ ಕರ್ನಾಟಕದಲ್ಲಿ ಈ ಸೇವೆಯನ್ನು ನಿಷೇಧಿಸಲಾಗಿದೆ. ಇದೀಗ ಕೇಂದ್ರ ಸರ್ಕಾರವು ದೇಶದಲ್ಲಿ ಬೈಕ್ ಟ್ಯಾಕ್ಸಿಗೆ ಮತ್ತೇ ಅವಕಾಶ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬೈಕ್ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್ಗಳ ಸೇವೆಯಲ್ಲಿ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿದೆ. ಆದರೆ ಇದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಆಗಲಿದೆ. ಮುಂದಿನ ದಿನಗಳಲ್ಲಿ ಪೀಕ್ ಅವರ್ನಲ್ಲಿಯೂ ಬೆಲೆ ಏರಿಕೆ ಆಗಲಿದೆ. ಅದೂ ಸಹ ಎರಡು ಪಟ್ಟು ಹೆಚ್ಚಳವಾಗಲಿದೆ ಒಟ್ಟಾರೆ ಈ ಸೇವೆಯಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಆಗಲಿದೆ.
ಸರ್ಕಾರವು ಉಬರ್, ಓಲಾ ಮತ್ತು ರಾಪಿಡೋದಂತಹ ಕ್ಯಾಬ್ ಅಗ್ರಿಗೇಟರ್ಗಳಿಗೆ ಪೀಕ್ ಸಮಯದಲ್ಲಿ ಮೂಲ ದರದ ಎರಡು ಪಟ್ಟುವರೆಗೆ ವಿಧಿಸಲು ಅವಕಾಶ ನೀಡಿದೆ. ಇದಕ್ಕೂ ಮೊದಲು, ಈ ಅಗ್ರಿಗೇಟರ್ಗಳು ಪೀಕ್ ಸಮಯದಲ್ಲಿ ಮೂಲ ದರದ 1.5 ಪಟ್ಟು ಸರ್ಜ್ ಬೆಲೆ ಅಥವಾ ಡೈನಾಮಿಕ್ ದರವಾಗಿ ವಿಧಿಸಬಹುದಿತ್ತು. ಇದನ್ನು ಈಗ ಹೆಚ್ಚಿಸಲಾಗಿದೆ. ಮಂಗಳವಾರ ಬಿಡುಗಡೆಯಾದ ಪರಿಷ್ಕೃತ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪೀಕ್ ಸಮಯದಲ್ಲಿ ಕ್ಯಾಬ್ ಅಗ್ರಿಗೇಟರ್ಗಳು 2X ಮೂಲ ದರವನ್ನು ವಿಧಿಸಲು ಸರ್ಕಾರ ಅನುಮತಿ ನೀಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ