Bengaluru News: ಮಕ್ಕಳ ಮದುವೆ ಮಾಡುವುದೆಂದರೆ, ಅಪ್ಪ ಅಮ್ಮನಿಗೆ ಅದೆಷ್ಟರ ಮಟ್ಟಿನ ಜವಾಬ್ದಾರಿ ಎಂದು ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಅದರಲ್ಲೂ ಆ್ಯಪ್ ಮೂಲಕ ಹೆಣ್ಣು- ಗಂಡು ಹುಡುಕಿ ಮಕ್ಕಳಿಗೆ ಮದುವೆ ಮಾಡುವುದು ಚಾಲೆಂಜೇ ಸರಿ. ಆದರೆ ಇಲ್ಲೋರ್ವ ವೃದ್ಧ ತನ್ನ ಮಗನಿಗೆ ವಧು ಹುಡುಕಲು ಹೋಗಿ, 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
61 ವರ್ಷದ ಬೆಂಗಳೂರಿನ ಶಂಕರ್ ಎಂಬ ವ್ಯಕ್ತಿ ತನ್ನ ಮನೆಗೆ ಸೊಸೆ ತರಲು ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹೆಣ್ಣು ಹುಡುಕುತ್ತಿದ್ದರು. ಆದರೆ ಹೆಣ್ಣಿನ ಹೆಸರಿನಲ್ಲಿ ಓರ್ವ ವ್ಯಕ್ತಿ, ಗೋಲ್ಡ್ ಬಾಂಡ್ ಹೆಸರಿನಲ್ಲಿ ಸಿಕ್ಕಿ ಹಾಕಿಸಿ, ವೃದ್ಧನಿಂದ 18 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ. ಅನಿಕಾ ವರ್ಮಾ ಎಂಬ ಹೆಸರಿನಲ್ಲಿ ಅಕೌಂಟ್ ರೆಡಿ ಮಾಡಿ, ಹುಡುಗನ ಪ್ರೊಫೈಲ್ ಪಡೆದು, ತನ್ನ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.
ಬಳಿಕ ಓರ್ವ ಹೆಣ್ಣು ಇವರ ಮಗನ ನಂಬರ್ ತೆಗೆದುಕೊಂಡು, ಹುಡುಗನೊಂದಿಗೆ ಮಾತನಾಡಿ, ತಾನು ಮುಂಬೈ ಮೂಲದ ಯುವತಿಯಾಗಿದ್ದು, ದುಬೈನಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಳು. ವಾಟ್ಸಪ್‌ನಲ್ಲಿ ಚಾಟಿಂಗ್ ಕೂಡ ನಡೆದಿತ್ತು.
ಕೊಂಚ ಹತ್ತಿರವಾದ ಬಳಿಕ, ಹುಡುಗನ ತಂದೆ ಶಂಕರ್ ಅವರ ಬಳಿ, ಚಿನ್ನದ ಹೂಡಿಕೆ ಬಗ್ಗೆ ಚರ್ಚೆ ನಡೆಸಿ, ಅವರ ತಲೆ ಕೆಡಿಸಿ, ಲಕ್ಷ ಲಕ್ಷ ಸುರಿಯುವಂತೆ ಮಾಡಿದ್ದಳು. ಆಕೆ ತನ್ನ ಭಾವಿ ಸೊಸೆ ಎಂದು ಆಕೆಯ ಮಾತು ನಂಬಿದ್ದ ಶಂಕರ್ 17 ಲಕ್ಷಕ್ಕೂ ಹೆಚ್ಚು ದುಡ್ಡನ್ನು ಚಿನ್ನದ ಹೂಡಿಕೆಗೆ ಹಾಕಲು, ಆಕೆಗೆ ನೀಡಿದ್ದರು. ಅದನ್ನು ಆಕೆ ದುಬೈನಲ್ಲಿ ಹೂಡಿಕೆ ಮಾಡಿ, ಹೆಚ್ಚು ದುಡ್ಡು ಮಾಡಿಕೊಟ್ಟು, ಮನೆ ಕಟ್ಟಲು ಸಹಾಯ ಮಾಡುವುದಾಗಿ ಹೇಳಿದ್ದಳು ಎಂದು ಶಂಕರ್ ದೂರಿನಲ್ಲಿ ತಿಳಿಸಿದ್ದಾರೆ.
ಹಣ ಪಡೆದ ಬಳಿಕ ಯುವತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಲಾಗಿದ್ದು, ದೂರು ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.