Thursday, November 21, 2024

Latest Posts

Sourav Ganguly: ಗಂಗೂಲಿಯ ದಾದಾಗಿರಿಗೆ 22ವರ್ಷ: ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ದಿನ

- Advertisement -

2002ರ ಲಾರ್ಡ್ಸ್​ ಮೈದಾನದಲ್ಲಿ ನಡೆದ ನ್ಯಾಟ್​​ವೆಸ್ಟ್ ತ್ರಿಕೋನ ಸರಣಿಯ ಫೈನಲ್ ಪಂದ್ಯವದು. ಪ್ರಶಸ್ತಿಗಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 325 ರನ್ ಕಲೆಹಾಕಿತು.

ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ನೀರಿಕ್ಷಿತ ಆರಂಭ ದೊರಕಲಿಲ್ಲ. 146 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡ ಭಾರತ ಸೋಲಿನತ್ತ ಮುಖ ಮಾಡಿತ್ತು. ಆದರೆ ಆಗಷ್ಟೇ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಯುವಪ್ರತಿಭೆಗಳಿಬ್ಬರು ಎದೆಗುಂದದೆ ದಿಟ್ಟ ಹೋರಾಟವನ್ನು ಪ್ರದರ್ಶಿಸಿದರು. ಅನುಭವಿ ಇಂಗ್ಲೆಂಡ್ ಬೌಲರ್​ಗಳ ದಾಳಿಯ ಮುಂದೆ ಹೋರಾಟ ಪ್ರದರ್ಶಿಸಿದ ಈ ಯುವ ಜೋಡಿ ಪಂದ್ಯದ ಪಲಿತಾಂಶವನ್ನೇ ಬದಲಿಸಿತ್ತು. ಪಂದ್ಯ ಗೆದ್ದ ಭಾರತ ತಂಡ ನ್ಯಾಟ್ ವೆಸ್ಟ್ ಟ್ರೋಫಿ ಗೆದ್ದು ಬೀಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಇಂಗ್ಲೆಂಡ್​ ತಂಡ ಟ್ರೆಸ್ಕೋತಿಕ್ (109ರನ್) ಹಾಗೂ ನಾಸಿರ್​ ಹುಸೇನ್​(115ರನ್) ಇಬ್ಬರ ಶತಕಗಳ ನೆರವಿನಿಂದ​ ಭಾರತಕ್ಕೆ 326 ರನ್​ಗಳ ಟಾರ್ಗೆಟ್​ ನೀಡಿತ್ತು.
ಈ ದೊಡ್ಡ ಗುರಿ ಬೆನ್ನತ್ತಿದ ಭಾರತ ತಂಡ ಮೊದಲ ವಿಕೆಟ್​ಗೆ 106 ರನ್​ಗಳ ಜೊತೆಯಾಟ ನೀಡಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ರನ್​ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ, ನಂತರ ಇಂಗ್ಲೆಂಡ್ ಬೌಲಿಂಗ್​ ದಾಳಿಗೆ ದಿಢೀರ್​ ಕುಸಿತ ಕಂಡ ಟೀಂ​ ಇಂಡಿಯಾ 146 ರನ್​ಗಳಾಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.

ಆಗ 6ನೇ ವಿಕೆಟ್​ ಜೊತೆಯಾಟದಲ್ಲಿ ಒಂದಾಗಿದ್ದೆ ಮೊಹಮ್ಮದ್​ ಕೈಫ್ ​ಔಟಾಗದೇ (87ರನ್) ಹಾಗೂ ಯುವರಾಜ್​ (69ರನ್) ಜೋಡಿ. 121 ರನ್​ಗಳ ಜೊತೆಯಾಟ ನಡೆಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಿಮವಾಗಿ ಭಾರತ ತಂಡ 8 ವಿಕೆಟ್​ ಕಳೆದುಕೊಂಡು 49.3 ಓವರ್​ಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು. ಅದರಲ್ಲೂ ಕೊನೆಯವರೆಗೂ ಹೋರಾಡಿದ್ದ ಕೈಫ್​ 75 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 6 ಬೌಂಡರಿಗಳ ನೆರವಿನಿಂದ 87 ರನ್​ಗಳಿಸಿ ಭಾರತಕ್ಕೆ ಟ್ರೋಫಿ ತಂದು ಕೊಟ್ಟಿದ್ದರು.

ಗೆಲುವಿನ ಬಳಿಕ ಲಾರ್ಡ್ಸ್​ ಮೈದಾನದ ಬಾಲ್ಕನಿಯಲ್ಲಿ ನಿಂತು ಅಂದಿನ ಟೀಮ್ ಇಂಡಿಯಾದ ನಾಯಕ ಸೌರವ್ ಗಂಗೂಲಿ ಟೀ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಇದು ಕೇವಲ ಗೆಲುವಿನ ಸಂಭ್ರಮವಾಗಿರಲಿಲ್ಲ, ಪ್ರತೀಕಾರದ ಪ್ರತ್ಯುತ್ತರವಾಗಿತ್ತು. ಈ ಐತಿಹಾಸಿಕ ಗೆಲುವಿಗೆ ಇಂದು 22 ವರ್ಷಗಳು.. ಅಂದರೆ, ದಾದಾ ಖ್ಯಾತಿಯ ಸೌರವ್ ಗಂಗೂಲಿಯ ದಾದಾಗಿರಿಗೆ ಬರೋಬ್ಬರಿ 22 ವರ್ಷಗಳು ತುಂಬಿವೆ.

ಅಂದಹಾಗೆ ಬಂಗಾಳದ ಹುಲಿ ಗಂಗೂಲಿ ಟಿ ಶರ್ಟ್ ಬಿಚ್ಚಿ ಸಂಭ್ರಮಿಸಲು ಮುಖ್ಯ ಕಾರಣ ಇಂಗ್ಲೆಂಡ್ ಆಟಗಾರ ಆಂಡ್ರ್ಯೂ ಫ್ಲಿಂಟಾಫ್. ನ್ಯಾಟ್ ವೆಸ್ಟ್ ಸರಣಿಗೂ ಮುನ್ನ ಭಾರತದಲ್ಲಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಇಂಗ್ಲೆಂಡ್ ತಂಡ ಸೋಲಿಸಿತ್ತು. ಆ ಗೆಲುವಿನ ಬಳಿಕ ಫ್ಲಿಂಟಾಫ್ ಶರ್ಟ್ ಬಿಚ್ಚಿ ಮುಂಬೈನ ವಾಂಖೇಡೆ ಮೈದಾನದಲ್ಲಿ ಸಂಭ್ರಮಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಸೌರವ್ ಗಂಗೂಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತು ತಕ್ಕ ಉತ್ತರವನ್ನೇ ಕೊಟ್ಟಿದ್ದರು.

ಇಷ್ಟೆಲ್ಲಾ ಆಗಿ ಭಾರತ ಪ್ರಶಸ್ತಿಯನ್ನು ಗೆದ್ದ ಸಂಭ್ರಮ ಮಾತ್ರವಲ್ಲದೇ ಈ ಪಂದ್ಯ ಇನ್ನೊಂದು ಕ್ರಾಂತಿಯನ್ನೇ ಸೃಷ್ಟಿಸಿತ್ತು. ಮ್ಯಾಚ್​ ಫಿಕ್ಸಿಂಗ್​ನಿಂದ ಕ್ರಿಕೆಟ್​ ನೋಡುವುದನ್ನೇ ಬಿಟ್ಟಿದ್ದ ಭಾರತೀಯರನ್ನು ಮತ್ತೆ ಮೈದಾನದತ್ತ ಹೆಜ್ಜೆ ಹಾಕುವಂತೆ ಮಾಡಿದ ಪಂದ್ಯವಿದು. ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ ಅಂದಿನ ಅಗ್ರ ರಾಷ್ಟ್ರಗಳ ಪಟ್ಟಿಗೆ ಸೇರುವಂತೆ ಮಾಡಿದ ಪಂದ್ಯವೂ ಕೂಡ. ಈ ಸರಣಿಯ ನಂತರ ಭಾರತ ತಂಡ ದೇಶ-ವಿದೇಶಗಳಲ್ಲಿ ಯಶಸ್ಸು ಸಾಧಿಸಿತು ಇದರಿಂದ ಭಾರತೀಯ ಆಟಗಾರರ ಆತ್ಮವಿಶ್ವಾಸ ಹೆಚ್ಚಾಯಿತು. 2003ರ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಬಲಿಷ್ಟ ತಂಡವಾಗಿ ಎಂಟ್ರಿ ಪಡೆಯಿತು ಮತ್ತು 1983ರ ನಂತರ ಮೊದಲಬಾರಿಗೆ ಪೈನಲ್ ಗೂ ಲಗ್ಗೆ ಇಟ್ಟಿತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಶರಣಾಯಿತು. ಹೀಗೆ, 2002ರ ನ್ಯಾಟ್​​ವೆಸ್ಟ್ ಸರಣಿ ಭಾರತೀಯ ಕ್ರಿಕೆಟ್ ಗೆ ಹೊಸ ರೂಪವನ್ನೇ ನೀಡಿತ್ತು. ಈ ಐತಿಹಾಸಿಕ ಸರಣಿ ಗೆಲುವಿನ ಸಂಭ್ರಮಕ್ಕೆ ಇಂದು 22 ವರ್ಷ ತುಂಬಿದೆ.

- Advertisement -

Latest Posts

Don't Miss