ರಾಜ್ಯದಲ್ಲಿ ಆಪ‘ರೇಷನ್’ BPL ಕಾರ್ಡ್‌

ಅನರ್ಹ ಬಿಪಿಎಲ್‌ ಕಾರ್ಡ್‌ಗಳ ವಿರುದ್ಧ ರಾಜ್ಯದ ಆಹಾರ ಇಲಾಖೆ ಸಮರ ಸಾರಿದೆ. ಪಡಿತರ ವ್ಯವಸ್ಥೆಯಲ್ಲಿ ಮೇಜರ್‌ ಸರ್ಜರಿ ಮಾಡಲು ಸರ್ಕಾರ ಮುಂದಾಗಿದೆ. ಪಡಿತರ ಅಕ್ಕಿ ಅನರ್ಹರ ಕೈಸೇರುತ್ತಿದ್ದು, ಬರೋಬ್ಬರಿ 8 ಲಕ್ಷ ಕಾರ್ಡ್‌ ರದ್ದು ಮಾಡುವ ಸಾಧ್ಯತೆ ಇದೆ. ಇಂದು ಆಹಾರ ಇಲಾಖೆ ಸಚಿವ ಕೆ.ಹೆಚ್‌. ಮುನಿಯಪ್ಪ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ.

ಎಕರೆಗಟ್ಟಲೆ ಜಮೀನು, ಓಡಾಡಲು ಐಷಾರಾಮಿ ಕಾರು, ವಾಸ ಮಾಡಲು ಬಂಗಲೆ ಇರುವವರು, ಪಡಿತರ ಚೀಟಿ ಪಡೆದು ರೇಷನ್ ಪಡೆಯುತ್ತಿದ್ದಾರೆ ಅನ್ನೋ ಆರೋಪ ಇದೆ. ಅದೆಷ್ಟೋ ಜನ ಪಡಿತರ ಅಕ್ಕಿಯನ್ನು ಬಳಸಿಕೊಳ್ಳುವ ಬದಲು, ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ 1.50 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಸುಮಾರು 12 ಲಕ್ಷ ಅನರ್ಹ, ಅನುಮಾನಾಸ್ಪದ ಕಾರ್ಡ್‌ಗಳಿರುವುದು ಪತ್ತೆಯಾಗಿದೆ. ಬೆಂಗಳೂರು ಒಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳು, ಸುಳ್ಳು ಮಾಹಿತಿ ನೀಡಿ ಕಾರ್ಡ್‌ ಹೊಂದಿರುವುದು ಕಂಡು ಬಂದಿದೆ.

2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ, ಬಿಪಿಎಲ್​ ಕಾರ್ಡ್​ ಪಡೆಯಲು ಹಲವು ನಿಬಂಧನೆಗಳನ್ನು ಹೇರಲಾಗಿತ್ತು. ಸರ್ಕಾರಿ ನೌಕರಿಯಲ್ಲಿ ಇರಬಾರದು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು. ನಾಲ್ಕು ಚಕ್ರದ ವಾಹನ ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು. ಹೀಗೆ ಹಲವು ಮಾನದಂಡ ಹೇರಲಾಗಿತ್ತು.

ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ ಅವರು ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಅನರ್ಹ ಕಾರ್ಡನ್ನು ರದ್ದು ಮಾಡಲ್ಲ. ಎಲ್ಲಾ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಲಾಗುವುದು. 8 ಲಕ್ಷ ಅನರ್ಹ ಕಾರ್ಡ್‌ಗಳು ಇರುವ ಬಗ್ಗೆ, ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಬಿಪಿಎಲ್‌ಗೆ ಅರ್ಹರಲ್ಲದಿದ್ರೆ, ಎಪಿಎಲ್‌ಗೆ ವರ್ಗಾವಣೆ ಮಾಡುತ್ತೇವೆ. ಸಣ್ಣಪುಟ್ಟ ಸಮಸ್ಯೆ ಇದ್ರೆ ಪರಿಷ್ಕರಣೆ ಮಾಡುತ್ತೇವೆ. ಯಾರಿಗೂ ತೊಂದರೆಯಾಗುವುದಿಲ್ಲ. ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡುವುದಾಗಿ ಕೆ.ಹೆಚ್‌ ಮುನಿಯಪ್ಪ ಹೇಳಿದ್ದಾರೆ.

About The Author