ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕುತೂಹಲಕಾರಿ ಬೆಳವಣಿಗೆಯಲ್ಲಿ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂಬ ವಿಚಾರ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ನಿನ್ನೆ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಸುಮಾರು ಹತ್ತು ನಿಮಿಷಗಳ ಕಾಲ ಮಾತನಾಡಿದ್ದರಂತೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಸಲಾಗುತ್ತಿದೆ. ಬಿಜೆಪಿ ಪಕ್ಷದ ಹಲವು ಮಾಜಿ ಹಾಗೂ ಹಾಲಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇದರ ಬೆನ್ನಲ್ಲೇ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿಧಾನಸಭಾ ಚುನಾವಣೆಯ ವೇಳೆ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದ ನಾಯಕರಿಗೆ ಕರೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಅಮಿತ್ ಶಾ ಅವರು ಶೆಟ್ಟರ್ ಅವರೊಂದಿಗಿನ ಮಾತುಕತೆ ವೇಳೆ ಮತ್ತೆ ಪಕ್ಷಕ್ಕೆ ಮರಳುವಂತೆ ತಿಳಿಸಿದ್ದಾರಂತೆ.
ಈ ಬಗ್ಗೆ ಶೆಟ್ಟರ್ ಆಪ್ತ ಮೂಲಗಳು ಮಾಹಿತಿ ನೀಡಿದ್ದು, ಆದರೆ ಅಮಿತ್ ಶಾ ಅವರು ಕರೆ ಮಾಡಿರುವ ಬಗ್ಗೆ ಇದುವರೆಗೂ ಜಗದೀಶ್ ಶೆಟ್ಟರ್ ಅವರು ಖಚಿತಪಡಿಸಿಲ್ಲ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಸಿಗದೆ ಬೇಸರಗೊಂಡಿದ್ದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು.ಆದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು. ಆದರೂ ಕಾಂಗ್ರೆಸ್ ಪಕ್ಷ ಶೆಟ್ಟರ್ ಅವರನ್ನು ಎಂಎಲ್ಸಿಯನ್ನಾಗಿ ಮಾಡಿದೆ.
ಅಮಿತ್ ಶಾ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಚಾಮರಾಜ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ, ಬಿಜೆಪಿ, ಜಗದೀಶ್ ಶೆಟ್ಟರ್ ಅವರಿಗೆ ಯಾವ ರೀತಿ ಮೋಸ ಮಾಡಿತ್ತು. ಇದು ಇಡೀ ರಾಜ್ಯಕ್ಕೆ ಗೊತ್ತಿದೆ. ಅಮಿತ್ ಶಾ ಕರೆ ಮಾಡಿದ ತಕ್ಷಣ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗುವುದಿಲ್ಲ.
ಕಾಂಗ್ರೆಸ್ ಅವರಿಗೆ ಸೂಕ್ತ ಸ್ಥಾನ ಮಾನ ಕೊಟ್ಟಿದೆ. ಅವರು ಎಲ್ಲವನ್ನು ಅಳೆದು ತೂಗಿ ಕಾಂಗ್ರೆಸ್ ಪಕ್ಷಕ್ಕೆ ಬಂದವರು. ಇನ್ನು ಸಾಕಷ್ಟು ಜನ ಬಿಜೆಪಿ-ಜೆಡಿಎಸ್‌ನಿಂದ ನಮ್ಮ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ.