ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ಹಿನ್ನೆಲೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉಗ್ರರನ್ನು ಭಾರತಕ್ಕೆ ನುಸುಳುವಂತೆ ಮಾಡಿ ದಾಳಿಗೆ ಕಾರಣವಾಗಿರುವ ಪಾಪಿಸ್ತಾನ ಕಾಲು ಕೆದರಿ ಭಾರತದ ತಂಟೆಗೆ ಬರುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಗಡಿ ನಿಯಂತ್ರಣ ರೇಖೆ ಸೇರಿದಂತೆ ಕಾಶ್ಮೀರ ಕಣಿವೆ ಹಲವು ಪ್ರದೇಶಗಳಲ್ಲಿ ಸತತ ಏಳನೇ ದಿನವೂ ಸಹ ಕದನ ವಿರಾಮ ಉಲ್ಲಂಘನೆ ಮಾಡಿದೆ.
ನಿಲ್ಲದ ಪಾಕ್ ಕದನ ವಿರಾಮ ಉಲ್ಲಂಘನೆ..
ಅಲ್ಲದೆ ಎಲ್‌ಒಸಿ, ಗಡಿ ನಿಯಂತ್ರಣ ರೇಖೆಯ ಬಳಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಉರಿ ಹಾಗೂ ಅಖ್ನೂರ್ ಪ್ರದೇಶಗಳ ಕಡೆಗೆ ಉಗ್ರರ ರಾಷ್ಟ್ರವು ನಿರಂತರವಾಗಿ ಅಪ್ರಚೋದಿತ ಶಸ್ತ್ರಾಸ್ತ್ರಗಳ ಸಮೇತ, ಗುಂಡು ಹಾರಿಸಿದೆ. ಈ ಗುಂಡಿನ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ಪಹಲ್ಗಾಮ್ ದಾಳಿಯ ಬಳಿಕ ಸತತವಾಗಿ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಕಳೆದ ಮಂಗಳವಾರವಷ್ಟೇ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ಆದರೂ ಆ ಎಚ್ಚರಿಕೆಯನ್ನೂ ಮೀರಿ ಪಾಕಿಗಳು ಭಾರತವನ್ನು ಕೆರಳಿಸಲು ಹೋಗಿ ತಕ್ಕ ಪ್ರತ್ತ್ಯತ್ತರ ಪಡೆಯತ್ತಿದೆ. ಅಲ್ಲದೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡದಂತೆ ಪಾಕಿಸ್ತಾನಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ತಮ್ಮ ನಡುವಿನ ಉದ್ವಿಗ್ನತೆಯನ್ನು ತಿಳಿಗೊಳಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.
ಗುಜರಾತ್ ಕರಾವಳಿಯಿಂದ ದಾಳಿ ಸಾಧ್ಯತೆ..
ಇನ್ನೂ ಯಾವುದೇ ಕ್ಷಣದಲ್ಲೂ ಭಾರತ ತಮ್ಮ ಮೇಲೆ ದಾಳಿ ನಡೆಸಬಹುದೆಂದು ತಿಳಿದಿರುವ ಪಾಕಿಸ್ತಾನ ಅರೇಬಿಯನ್ ಸಮುದ್ರದಲ್ಲಿ ನೌಕಾ ಸಮರಾಭ್ಯಾಸ ನಡೆಸುತ್ತಿದೆ. ಈ ಸ್ಥಳದಿಂದ ಕೇವಲ 85 ನಾಟಿಕಲ್ ಮೈಲಿಬ ಅಂದರೆ 157 ಕಿಲೋ ಮೀಟರ್ ಇರುವ ಗುಜರಾತ್ ಕರಾವಳಿ ಪ್ರದೇಶದಿಂದ ಗುಂಡು ಹಾರಿಸಲು ಭಾರತೀಯ ನೌಕಾ ಪಡೆಯು ಈಗಾಗಲೇ ನಾಲ್ಕು ಹಸಿರು ಅಧಿಸೂಚನೆಗಳನ್ನು ಹೊರಡಿಸಿದೆ. ದಾಳಿಯ ಸಾಧ್ಯತೆ ಕಂಡು ಬರುತ್ತಿದೆ.
ಸಾರ್ವಜನಿಕ ಎಚ್ಚರಿಕೆಯ ನೋಟಿಸ್..
ಅಂದಹಾಗೆ ಈ ಹಸಿರು ಅಧಿಸೂಚನೆ ಎಂದರೆ, ನೌಕಾ ಭಾಷೆಯಲ್ಲಿ ನಿರ್ಧಿಷ್ಟವಾದ ಒಂದು ಪ್ರದೇಶ ಹಾಗೂ ಸಮಯದಲ್ಲಿ ಯೋಜಿತ್ ಫೈರಿಂಗ್, ತಾಲೀಮುಗಳ ಕುರಿತು ಹಡಗುಗಳು ಹಾಗೂ ವಿಮಾನಗಳಿಗೆ ಮಾಹಿತಿ ತಲುಪಿಸುವುದಕ್ಕಾಗಿ ಕಡಲ ಅಧಿಕಾರಿಗಳು ಸಾರ್ವಜನಿಕರಿಗೆ ಹೊರಡಿಸುವ ಎಚ್ಚರಿಕೆಯ ನೋಟಿ ಸ್ ಆಗಿರುತ್ತದೆ. ಅಲ್ಲದೆ ಈ ರೀತಿಯ ಅಧಿಸೂಚನೆಗಳು ವೈರಿಗಳ ಮೇಲೆ ದಾಳಿ ನಡೆಸುವಾಗ ಮಿಲಿಟರಿ ಕಾರ್ಯ ಯೋಜನೆಗಳ ಪಟ್ಟಿಯಲ್ಲಿ ಗುರುತಿಸಲಾಗಿರುವ ಸ್ಥಳಗಳಲ್ಲಿ ಆಗುವ ಹಾನಿಯನ್ನು ತಪ್ಪಿಸಲು ಸಹಾಯಕಾರಿ ಆಗಲಿವೆ. ಇಷ್ಟೇ ಅಲ್ಲದೆ ವಾಣಿಜ್ಯ ಹಡಗುಗಳನ್ನು ಅಲರ್ಟ್ ಮಾಡುವ ಮೂಲಕ ಅವುಗಳ ಸುರಕ್ಷತೆಗೆ ಒತ್ತು ನೀಡುತ್ತದೆ.
ಪಾಕ್ ಬಗ್ಗು ಬಡಿಯಲು ನೌಕಾ ಪಡೆ ತಾಲೀಮು..!
ಇನ್ನೂ ಪ್ರಮುಖವಾಗಿ ಭಾರತೀಯ ನೌಕಾಪಡೆಯು ವಿವಿಧ ತಾಲೀಮುಗಳಲ್ಲಿ ತೊಡಗಿಕೊಂಡಿದ್ದು, ಶೀಘ್ರದಲ್ಲೇ ಪಾಕಿಗಳ ಮೇಲೆ ದಾಳಿಗೆ ಯೋಜನೆ ರೂಪಿಸುತ್ತಿದೆ. ಅಂದಹಾಗೆ ಈ ಫೈರಿಂಗ್ ಅಧಿಸೂಚನೆಗಳು ಏಪ್ರಿಲ್ 30 ರಿಂದ ಮೇ 3, 2025 ರವರೆಗೆ ಚಾಲ್ತಿಯಲ್ಲಿರುತ್ತದೆ. ಪರಿಸ್ಥಿತಿ ಆಧರಿಸಿ ಇದರ ಅವಧಿಯಲ್ಲಿ ವಿಸ್ತರಣೆಯೂ ಆಗಬಹುದಾಗಿದೆ. ರಕ್ಷಣಾ ಮೂಲಗಳ ಪ್ರಕಾರ, ಪಾಕಿಸ್ತಾನವು ಕಳೆದ ವಾರದಲ್ಲಿ ತನ್ನ ನಾಲ್ಕನೇ ನೌಕಾ ಕ್ಷಿಪಣಿ ಫೈರಿಂಗ್ ಅಧಿಸೂಚನೆಯನ್ನು ಹೊರಡಿಸಿದೆ ಆದರೆ ಇದುವರೆಗೂ ಅದು ಯಾವುದೇ ಕ್ಷಿಪಣಿಯನ್ನು ಉಡಾಯಿಸಿಲ್ಲ. ಭಾರತೀಯ ನೌಕಾಪಡೆಯು ಪರಿಸ್ಥಿತಿ ಮತ್ತು ಈ ಪ್ರದೇಶದಲ್ಲಿ ಪಾಕಿಸ್ತಾನದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ವೇಳೆ ನೌಕಾ ನೆಲೆಯಲ್ಲಿಯೂ ತನ್ನ ಚಾಳಿ ಮುಂದುವರೆಸಿದರೆ ಅದನ್ನು ಬಗ್ಗು ಬಡಿಯಲು ಭಾರತೀಯ ನೌಕಾ ಸೇನೆಯು ಸಿದ್ಧವಾಗಿದೆ.
ಬಾಂಗ್ಲಾ ಉಗ್ರರಿಗೆ ಪಾಕ್ ನೆರವು..?
ಬಾಂಗ್ಲಾ ದೇಶದಲ್ಲಿ ಅಡಗಿರುವ ಉಗ್ರರಿಂದ ಸಹಾಯ ಪಡೆಯಲು ಪಾಕಿಸ್ತಾನ ಮುಂದಾಗಿದ್ದು, ಬಾಂಗ್ಲಾ ದೇಶದ ಭೂಗತ ಭಯೋತ್ಪಾದಕರನ್ನು ಸಂಪರ್ಕಿಸುತ್ತಿದೆ. ಅಲ್ಲದೆ ಅಲ್ಲಿನ ಭಯೋತ್ಪಾದಕರ ಕಮಾಂಡರ್ ಜೊತೆ ಮಾತುಕತೆ ನಡೆಸಿದೆ. ಬಾಂಗ್ಲಾ ದೇಶದ ಗಡಿಯಿಂದ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನದ ಐಎಸ್‌ಐ ಸಂಚು ಮಾಡಿದೆ. ಹೀಗಾಗಿ ಭಾರತ, ಬಾಂಗ್ಲಾ ಹಾಗೂ ಮಯನ್ಮಾರ್ ದೇಶಗಳ ಗಡಿಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಸ್ಫೋಟಗಳನ್ನು ನಡೆಸುತ್ತಲೇ ಬಂದಿರುವ ಪಾಕಿಸ್ತಾನದ ಐಎಸ್‌ಐ ಬಾಂಗ್ಲಾ ದೇಶದ ಉಗ್ರರಿಗೆ ಬೆಂಬಲ ನೀಡಿ ಇನ್ನೊಂದು ದಾಳಿ ನಡೆಸಲು ಅವರನ್ನು ಉತ್ತೇಜಿಸುತ್ತಿದೆ.