ತುಮಕೂರು ಜಿಲ್ಲೆಯ 52 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, 20 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಘೋಷಿಸಿದರು. ಅವರು ಪಟ್ಟಣದಲ್ಲಿ ಮಂಗಳವಾರ ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇಂದಿರಾ ಕ್ಯಾಂಟೀನ್ಗಳ ಮೂಲಕ ಬಡವರಿಗೆ ದೊಡ್ಡ ಮಟ್ಟದಲ್ಲಿ ನೆರವು ಸಿಗುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ ಪ್ರತೀ ಕ್ಯಾಂಟೀನ್ನಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಲಾ 200 ಮಂದಿಗೆ ಊಟದ ವ್ಯವಸ್ಥೆಯಿದೆ. ಆದರೆ ಇದು ಸಾಲದ ಕಾರಣ, ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ ಜನರಿಗೆ ಜಮೀನಿನ ಹಕ್ಕು ನೀಡುವ ಮಹತ್ವದ ಕಾರ್ಯ ಕೈಗೊಂಡಿದೆ ಎಂದು ಪರಮೇಶ್ವರ ಹೇಳಿದರು. ಹಲವು ವರ್ಷಗಳಿಂದ ಹಕ್ಕುದಾರಿಕೆ ಪಡೆಯದೆ ಸಂಕಷ್ಟ ಅನುಭವಿಸುತ್ತಿದ್ದ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದರು.
ಮಾರಸಂದ್ರದಲ್ಲಿ ನಡೆದ ಪೋಡಿ ಹಂಚಿಕೆ ಕಾರ್ಯಕ್ರಮದಲ್ಲಿ ನೂರಾರು ರೈತರಿಗೆ ಚಕ್ಬಂದಿ ನಿಗದಿ, ನಕ್ಷೆ ತಯಾರಿಕೆ ಹಾಗೂ ಆರ್ಟಿಸಿ ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಐವತ್ತು ಸಾವಿರಕ್ಕೂ ಹೆಚ್ಚು ರೈತರಿಗೆ ಪೋಡಿ ಮಾಡಿಸಬೇಕಿದ್ದು, ಇದರಿಂದ ಭೂ ಸಂಬಂಧಿತ ಕಾನೂನು ತೊಂದರೆಗಳು ನಿವಾರಣೆಯಾಗಲಿವೆ ಎಂದು ಸಚಿವರು ವಿವರಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




