www.karnatakatv.net : ರಾಯಚೂರು : ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರ ಪಡಿತರ ಚೀಟಿಯನ್ನು ಒದಗಿಸಿದೆ. ಆದ್ರೆ ಪಡಿತರ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಗುಣಮಟ್ಟದ ರೇಷನ್ ಕಳಪೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹೌದು ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾ.ಪಂ.ವ್ಯಾಪ್ತಿಗೆ ಬರುವ ಹಸಮಕಲ್ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದ ಗೋಧಿ ವಿತರಣೆ ಮಾಡಲಾಗಿದೆ. ಕಳಪೆ ಗುಣಮಟ್ಟದ ಗೋದಿ ನೋಡಿ ಗ್ರಾಮದ ಜನ್ರು ಕಂಗಾಲಾಗಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಿರುವ
ಗೋಧಿಯಲ್ಲಿ ಕಲ್ಲು, ಮಣ್ಣು,ಹುಳು ಮಿಶ್ರಿತ ದುರ್ವಾಸನೆ ಬರುವ ಗೋಧಿಯನ್ನು ವಿತರಣೆ ಮಾಡಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಮೂರ್ನಾಲ್ಕು ತಿಂಗಳುಗಳಿಂದ ಆಹಾರ ಧಾನ್ಯಗಳನ್ನು ಶೇಖರಿಸಿಟ್ಟು ನಂತರದಲ್ಲಿ ವಿತರಣೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಪ್ರಶ್ನಿಸಿದ್ರೆ ಬಂದಿರುವ ಗೋಧಿಯನ್ನು ವಿತರಣೆ ಮಾಡುವುದಷ್ಟೇ ನಮ್ಮ ಕೆಲಸ. ಎಂಥ ದಾಸ್ತಾನು ಬರುತ್ತದೆಯೋ ಅದನ್ನೇ ವಿತರಿಸುತ್ತೇವೆ ಎಂದು ಸಬೂಬು ಹೇಳ್ತಾರಂತೆ. ದನಗಳು ತಿನ್ನಲು ಯೋಗ್ಯವಲ್ಲದ ಗೋಧಿಯನ್ನು ವಿತರಣೆ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಗ್ರಾಮಸ್ಥರು ಹಿಡೀಶಾಪ ಹಾಕುತ್ತಿದ್ದಾರೆ. ಇನ್ನು ವಿತರಿಸಿರುವ ಕಳಪೆ ಗೋಧಿ ವಾಪಸ್ ಪಡೆದು, ಗುಣಮಟ್ಟದ ಗೋಧಿ ವಿತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಅನಿಲ್‌ಕುಮಾರ್ ಕರ್ನಾಟಕ ಟಿವಿ ರಾಯಚೂರು




