ಸ್ನಾನ ಮಾಡಲು ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕಿರಗೆರೆ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು 52 ವರ್ಷದ ಅಬ್ಬಾಸ್ ನಾಸೂರ್ ಎಂದು ಗುರುತಿಸಲಾಗಿದೆ. ಮೃತ ಅಬ್ಬಾಸ್‌ ನಾಸೂರ್‌ ಮೂಲತಃ ಹಿರೇಕೆರೂರುಕೋಡ ಗ್ರಾಮದ ನಿವಾಸಿಯಾಗಿದ್ದು, ಮಂಗಳವಾರ ಕುಟುಂಬ ಸಮೇತ ಪಿಕ್ನಿಕ್‌ಗೆ ತೆರಳಿದ್ದರು.

ಈ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡಲು ಇಳಿದ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾರೆ. ತಕ್ಷಣ ಸ್ಥಳೀಯರು ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞರು ಹುಡುಕಾಟ ನಡೆಸಿ ಅವರ ಶವವನ್ನು ನೀರಿನಿಂದ ಹೊರತೆಗೆಯಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಕ್ನಿಕ್‌ಗೆ ತೆರಳಿ ಸಂದರ್ಭದಲ್ಲಿ ನಡೆದ ಈ ದುರಂತ ಘಟನೆ ಕುಟುಂಬದವರಲ್ಲಿ ಹಾಗೂ ಸ್ಥಳೀಯರಲ್ಲಿ ಶೋಕ ಮೂಡಿಸಿದೆ. ನದಿ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

About The Author