Kerala News: ಧಾರಾಕಾರ ಮಳೆಯ ಕಾರಣ, ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ, 400ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ವಯನಾಡು ಇದೀಗ, ನರಕ ಸದೃಶವಾಗಿದೆ.
ಇಂದು ಪ್ರಧಾನಿ ಮೋದಿ, ಭೂಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಕಲ್ಪಟ್ಟಾ ರಸ್ತೆ ಮಾರ್ಗವಾಗಿ ಚುರಲ್‌ಮಲ್ಗೆ ತಲುಪಿದ ಪ್ರಧಾನಿ ಮೋದಿ, ಅಲ್ಲಿನ ಸಂತ್ರಸ್ತರನ್ನು ಭೇಟಿಯಾಗಿ, ಸಾಂತ್ವನ ಹೇಳಿ, ಅವರಿಗೆ ಅವಶ್ಯಕವಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್, ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಜಿಲ್ಲಾಧಿಕಾರಿ ಮೇಘಶ್ರೀ, ಎಡಿಜಿಪಿ ಅಜೀತ್ ಕುಮಾರ್, ಪ್ರಧಾನಿ ಜೊತೆಗಿದ್ದು, ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಮೋದಿ, ಕೆಲವೇ ಘಂಟೆಯಲ್ಲಿ ನಿರ್ಮಿಸಿದ್ದ ಬ್ರಿಜ್ ಮೇಲೆಯೂ ನಡೆದು ಬಂದಿದ್ದಾರೆ. ಬಳಿಕ ಸಂತ್ರಸ್ತರು ಚಿಕಿತ್ಸೆ ಪಡೆಯುವ ಸ್ಥಳಕ್ಕೆ ಹೋಗಿ, ಅವರ ಆರೋಗ್ಯವನ್ನೂ ವಿಚಾರಿಸಿದ್ದಾರೆ. ಇದಾದ ಬಳಿಕ, ಅಲ್ಲಿನ ಮಂತ್ರಿಗಳು, ಅಧಿಕಾರಿಗಳೊಂದಿಗೆ ಕೆಲ ವಿಷಯಗಳ ಬಗ್ಗೆ ಸಭೆ ನಡೆಸಿದ್ದಾರೆ.