ನೆನೆಗುದಿಗೆ ಬಿದ್ದ ಮನೆಮನೆಗೆ ಪಿ.ಎನ್.ಜಿ ಅಳವಡಿಕೆ; ಜನರ ನಿರಾಸಕ್ತಿಯಿಂದ ಯೋಜನೆಗೆ ಗ್ರಹಣ..!

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರಲ್ಲಿ ಸ್ಮಾರ್ಟ್ ಟಚ್ ಕೊಡುವ ಬಹುತೇಕ ಯೋಜನೆಗಳು ಒಂದಿಲ್ಲೊಂದು ರೀತಿಯಲ್ಲಿ ವಿಫಲವಾಗುತ್ತಲೇ‌ ಸಾಗಿವೆ. ಸ್ಮಾರ್ಟ್ ಸಿಟಿ ಮಹತ್ವದ ಯೋಜನೆಯಾಗಿದ್ದರೂ ಇದರ ಲಾಭ ಮಾತ್ರ ಜನರಿಗೆ ಮುಟ್ಟಿದ್ದು, ಮಾತ್ರ ಕಡಿಮೆ. ಈ ಪಟ್ಟಿಯಲ್ಲಿ ಮತ್ತೊಂದು ಯೋಜನೆ ಸೇರಿಕೊಂಡಿದೆ.

ಅವಳಿನಗರದ ಎಲ್ಲಾ ಮನೆಗಳಿಗೆ ಸಂಪರ್ಕ ಕಲ್ಪಿಸುವ ಪೈಪ್ಟ್ ನ್ಯಾಚ್ಯುರಲ್ ಗ್ಯಾಸ್ (ಪಿಎನ್‌ಜಿ) ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಾಥಮಿಕ ಹಂತದ ಯೋಜನೆಗೆ ಒಳಪಟ್ಟ 1.5 ಲಕ್ಷ ಮನೆಗಳ ಪೈಕಿ ಕಳೆದ ಎಂಟು ವರ್ಷಗಳಲ್ಲಿ ಕೇವಲ 21,630 ಸಾವಿರ ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಹೌದು..ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅನ್ನು ಕೈಗಾರಿಕೆ, ವಾಣಿಜ್ಯ ಮತ್ತು ಗೃಹಬಳಕೆ (ವಸತಿ) ಉದ್ದೇಶಗಳಿಗೆ ಮತ್ತು ಸಾರಿಗೆ ವಲಯಕ್ಕೆ ನೈಸರ್ಗಿಕ ಅನಿಲ ಪೂರೈಸುವ ನಿಟ್ಟಿನಲ್ಲಿ 2017 ರಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಈವರೆಗೆ ಕೇವಲ 21,630 ಮನೆಗಳು (ಗೃಹ) ಸಂಪರ್ಕಕ್ಕೆ ನೋಂದಾಯಿಸಿಕೊಂಡಿವೆ. ಈಗಾಗಲೇ ಅವಳಿ ನಗರಗಳಲ್ಲಿ ಸುಮಾರು 200 ಕೋಟಿ ರೂ. ಹೂಡಿಕೆ ಮಾಡುವ ಮೂಲಕ 63 ಕಿ.ಮೀ ವ್ಯಾಪ್ತಿಗೆ ಉಕ್ಕಿನ ಪೈಪ್‌ಲೈನ್‌ ಮತ್ತು 300 ಕಿ.ಮೀ ಮಧ್ಯಮ ಸಾಂದ್ರತೆಯ ಪಾಲಿಥಿಲೀನ್ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಅವಳಿ ನಗರಗಳ ಜನರು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಗ್ಯಾಸ್ ಸಿಲಿಂಡರ್‌ಗಳನ್ನೇ ಅವಲಂಬಿಸಿದ್ದಾರೆ ಹೊರತು ಪಿಎನ್‌ಜಿ ಬಳಕೆಗೆ ಮಾತ್ರ ಮುಂದಾಗುತ್ತಿಲ್ಲ.

ಈಗಾಗಲೇ ಹಾಕಲಾದ ಪೈಪ್‌ ಲೈನ್‌ಗಳು 60,000 ಸಂಪರ್ಕಗಳನ್ನು ನೀಡುವ ಸಾಮರ್ಥ್ಯ ಹೊಂದಿವೆ, ಆದರೆ, ಕೇವಲ 21,630 ಕನೆಕ್ಷನ್ ನೀಡಲಾಗಿದೆ. ಇನ್ನೂ ಹಲವರು ಹೊಸ ಅನಿಲ ಯೋಜನೆಯನ್ನು ಅಳವಡಿಸಿಕೊಳ್ಳಲು ಸಿದ್ದರಿದ್ದರೂ ಕಿರಿದಾದ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಯೋಜನೆ ಅನುಷ್ಠಾನ ಕಾರ್ಯ ಯಶಸ್ವಿಯಾಗುತ್ತಿಲ್ಲ. ಜನರ ನಿರಾಸಕ್ತಿಯಿಂದ ಪಿಎನ್‌ಜಿ ಸಂಪರ್ಕ ವಿಸ್ತರಣೆ ಕಾರ್ಯ ನನೆಗುದಿಗೆ ಬಿದ್ದಿದೆ. ಒಂದು ಕಿಲೋಮೀಟರ್ ಪೈಪ್‌ಲೈನ್ ಅಳವಡಿಕೆಗೆ ಸುಮಾರು 25 ಲಕ್ಷ ರೂ. ವೆಚ್ಚ ತಗುಲುತ್ತಿದ್ದು,ಜನ ಅದನ್ನು ಬಳಸಿಕೊಳ್ಳದಿದ್ದರೆ ಕೋಟ್ಯಂತರ ರೂ. ನೀರಿನಲ್ಲಿ ಹೋಮ ಮಾಡಿದಂತೆ ಎಂಬ ಕಾರಣಕ್ಕೆ ಯೋಜನೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆಯಂತೆ. ಇದರಿಂದ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ.

ಒಟ್ಟಿನಲ್ಲಿ ಅನಿಲ ದರ ಹೆಚ್ಚಿಗೆ ಹಾಗೂ ಇನ್ನಿತರ ಕಾರಣಗಳಿಂದ ಜನರು ನಿರಾಸಕ್ತಿ ತೋರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತ ಮಂಡಳಿ ಜನರಿಗೆ ಸೂಕ್ತ ನಿರ್ದೇಶನ ನೀಡುವ ಕಾರ್ಯವನ್ನು ಮಾಡಬೇಕಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author