ಇದಾಗಲೇ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ, ಮಕ್ಕಳ ಪಾಲಿಗೆ ಅಮೃತವಾಗಿರುವಂತ ತಾಯಿಯ ಎದೆ ಹಾಲು ವಿಷವಾಗ್ತಿದೆ ಅನ್ನೋವಂತದ್ದು, ಇದೊಂದು ಅಘಾತಕಾರಿ ಸತ್ಯ ಅಂತಲೇ ಹೇಳಬಹುದು, ಜಗತ್ತಲ್ಲಿ ಯಾವುದರಲ್ಲಿ ವಿಷ ಇಲ್ಲ ಹೇಳಿ, ನಾವ್ ಉಸಿರಾಡೋ ಗಾಳಿಯಿಂದ ಹಿಡಿದು ತಿನ್ನೋ ಆಹಾರದಲ್ಲೂ ರಾಸಾಯನಿಕಗಳು ಇದ್ದೆ ಇರುತವೆ ಆದ್ರೆ, ತಾಯಿಯ ಎದೆ ಹಾಲಲ್ಲೂ ಇದೇ ಕತೆ ಅಂದ್ರೆ ನಿಜಕ್ಕೂ ಅಚ್ಚರಿ, ಗಾಬರಿ ಪಡೋವಂತ ವಿಚಾರವೇ…
ಪಟ್ನಾದ ಮಹಾವೀರ್ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನ ಕೇಂದ್ರದ ಡಾ.ಅರುಣ್ ಕುಮಾರ್ ಹಾಗೂ ಪ್ರೊ.ಅಶೋಕ್ ಘೋಷ್ ನೇತೃತ್ವದಲ್ಲಿ ನಡೆದ ಅಧ್ಯಯನವನ್ನು ನವದೆಹಲಿಯ ಏಮ್ಸ್‌ನ ಜೀವರಸಾಯನಶಾಸ್ತ್ರ ವಿಭಾಗದ ಡಾ.ಅಶೋಕ್ ಶರ್ಮಾ ಅವರ ತಂಡದ ಸಹಯೋಗದೊಂದಿಗೆ 2021ರ ಅಕ್ಟೋಬರ್‌ನಿಂದ 2024ರ ಜುಲೈವರೆಗೆ ನಡೆಸಲಾಗಿತ್ತು.ಭೋಜ್‌ಪುರ, ಬೇಗುಸರಾಯ್, ಸಮಸ್ತಿಪುರ, ಖಗಾರಿಯಾ, ಕಟಿಹಾರ್ ಮತ್ತು ನಳಂದ ಜಿಲ್ಲೆಗಳ 17ರಿಂದ 35 ವರ್ಷ ವಯಸ್ಸಿನ 40 ಮಹಿಳೆಯರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿತ್ತು. ಎಲ್ಲ 40 ಮಾದರಿಗಳಲ್ಲಿಯೂ ಯುರೇನಿಯಂ (U238) ಪತ್ತೆಯಾಗಿದೆ.
ಪ್ರತಿ ಲೀಟರ್ ಹಾಲಿನಲ್ಲಿ ಯುರೇನಿಯಂ ಪ್ರಮಾಣ 0 ರಿಂದ 5.25 ಮೈಕ್ರೋಗ್ರಾಂ ನಡುವೆ ಇದೆ ಎಂದು ಕಂಡುಬಂದಿದೆ.ಅತ್ಯಧಿಕ ಮಟ್ಟ ಖಗಾರಿಯಾ ಮತ್ತು ಕಟಿಹಾರ್ ಜಿಲ್ಲೆಗಳಲ್ಲಿಯೂ ಕಂಡುಬಂದಿದ್ದರೆ, ನಳಂದದಲ್ಲಿ ತುಲನಾತ್ಮಕವಾಗಿ ಕಡಿಮೆ ಮಟ್ಟ ದಾಖಲಾಗಿದೆ.’ಹಾಲಿನಲ್ಲಿ ಯುರೇನಿಯಂ ಎಲ್ಲಿಂದ ಬಂದಿದೆ ಎಂಬುದು ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ.ಆದರೆ ಬಿಹಾರದ ಅಂತರ್ಜಲದಲ್ಲಿ ದೀರ್ಘಕಾಲದಿಂದ ಯುರೇನಿಯಂ ಕಲುಷಿತಗೊಂಡಿರುವುದು ಗೊತ್ತಿರುವ ಸಂಗತಿ.ಈ ಕಲುಷಿತ ನೀರು ಕುಡಿಯುವುದು ಅಥವಾ ಅದರಿಂದ ನೀರಾವರಿ ಮಾಡಿದ ಆಹಾರ ಪದಾರ್ಥಗಳ ಸೇವನೆಯಿಂದ ತಾಯಿಯ ದೇಹಕ್ಕೆ ಯುರೇನಿಯಂ ತಲುಪಿ, ಹಾಲಿನ ಮೂಲಕ ಮಗುವಿಗೆ ಹರಡುತ್ತಿದೆ ಎಂದು ಶಂಕಿಸಲಾಗಿದೆ’ ಎಂದು ಅಧ್ಯಯನದ ಸಹ-ಲೇಖಕ ಡಾ. ಅಶೋಕ್ ಶರ್ಮಾ ತಿಳಿಸಿದ್ದಾರೆ.
ಹಾಗಿದ್ರೆ ಯುರೇನಿಯಮ್ ಹೇಗೆ ತಾಯಿಯ ಹಾಲಿಗೆ ಬರುತ್ತೆ ?, ಯುರೇನಿಯಮ್ ಹೊಂದಿರುವ ಕಲ್ಮಶ ನೀರನ್ನು ಕುಡಿಯುವುದರಿಂದ, ಖನಿಜ ಗಣಿಗಳ ಪ್ರದೇಶದ ಮಲಿನ ವಾತಾವರಣ, ಮಣ್ಣು/ನೀರು ಮಾಲಿನ್ಯ ಇರುವ ಪ್ರದೇಶದಲ್ಲಿ ವಾಸ ಮಾಡುತ್ತಿರುವವರಿಗೆ ಇದರ ಅಪಾಯ ಹೆಚ್ಚು ಅಂತಲೇ ಹೇಳಬಹುದು, ನಮ್ಮ ಬೆಂಗಳೂರಿನ ವಾತಾವರಣವನ್ನ ನೋಡಿದಾಗ ಬಿಹಾರದಲ್ಲಿ ಇರುವಂತ ಈ ಸಮಸ್ಯೆ ನಮ್ಮ ಬೆಂಗಳೂರಿಗೂ ಬರೋದು ಆಶ್ಚರ್ಯ ಏನಲ್ಲ, ಈ ಅಸಮಸ್ಯೆಗೆ ಪರಿಹಾರವೂ ಅಷ್ಟು ಸುಲಭದ ಮಾತಲ್ಲ , ಹಾಗಾಗಿ ತಾಯಂದಿರೇ, ತಮ್ಮ ಕೈಲಾದಷ್ಟು ಈ ಸಮಸ್ಯೆ ನಿಮ್ಮ ಬಳಿ ಸುಳಿಯದಂತೆ ಜಾಗೃತರಾಗಿರಿ….
ಯುರೇನಿಯಂ ಇದ್ರೆ ಏನು ತೊಂದರೆ ಆಗುತ್ತೆ ಅಂತ ನೋಡ್ತಾ ಹೋಗೋದಾದ್ರೆ ,ಇದು ಒಂದು ಭಾರವಾದ ಲೋಹ ಮತ್ತು ರೇಡಿಯೋ ಆಕ್ಟಿವ್ ಅಂಶವಾಗಿದ್ದು, ಇದು ಮೂತ್ರಪಿಂಡ ಹಾನಿ, ನರವೈಜ್ಞಾನಿಕ ತೊಂದರೆಗಳು, ಮಕ್ಕಳ ಬೆಳವಣಿಗೆಯಲ್ಲಿ ತಡೆ, ಮತ್ತು ದೀರ್ಘಕಾಲದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.ಬಿಹಾರದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅಂತರ್ಜಲದ ಮೇಲೆ ಅತೀ ಹೆಚ್ಚಿನ ಅವಲಂಬನೆ, ಕೈಗಾರಿಕಾ ತ್ಯಾಜ್ಯದ ಸಂಸ್ಕರಣೆಯ ಕೊರತೆ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿ ಬಳಕೆ, ಇವೆಲ್ಲವೂ ಮಣ್ಣು ಮತ್ತು ನೀರಿನ ಕಲುಷಿತತೆಗೆ ಮುಖ್ಯ ಕಾರಣಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.ಈ ಅಧ್ಯಯನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತೀವ್ರ ಎಚ್ಚರಿಕೆಯ ಸಂದೇಶವಾಗಿದೆ.ಅಂತರ್ಜಲದ ಗುಣಮಟ್ಟ ಸುಧಾರಣೆ, ಸುರಕ್ಷಿತ ಕುಡಿಯುವ ನೀರಿನ ಒದಗಿಸುವಿಕೆ ಮತ್ತು ತಾಯ್ತಂದೆಯರ ಆರೋಗ್ಯ ಕಾಳಜಿಗೆ ತುರ್ತು ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಒತ್ತಿ ಹೇಳಿದ್ದಾರೆ.
ವರದಿ : ಗಾಯತ್ರಿ ಗುಬ್ಬಿ




