ಹಾಸನ: ಬೇಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಎರಡು ಹಸುಗಳು ತಿಂದು ಹಾಕಿವೆ ಎಂದು ತಡರಾತ್ರಿಯವರೆಗೆ ಕಟ್ಟಿಹಾಕಿದ ಘಟನೆ ನಡೆದಿದೆ.
ನೆಹರು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮೇಯುತ್ತಿದ್ದ ಹಸುಗಳನ್ನು ಸಿಪಿಐ ಯೋಗೇಶ್ ನಿರ್ದೇಶನದ ಮೇರೆಗೆ ಸಿಬ್ಬಂದಿ ಕಟ್ಟಿಹಾಕಿದ್ದಾರೆ. ಸಂಜೆ 6.30ಕ್ಕೆ ಹಾಲು ಕರೆಯಬೇಕಿದ್ದು, ಈ ಸಮಯವಾದರು ಹಸುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಮಾಲಿಕರಾದ ಸಿಂಗಮ್ಮ, ಸಿದ್ದಮ್ಮ ಎಂಬ ವೃದ್ದೆಯರು ಹಸು ಹುಡುಕಾಡಿದಾಗ ಠಾಣೆ ಆವರಣದಲ್ಲಿ ಕಟ್ಟಿಹಾಕಿರುವುದಾಗಿ ತಿಳಿದು ಪೊಲೀಸ್ ಸಿಬ್ಬಂದಿಗೆ ಹಸು ಬಿಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ನಾವು ಬೇಕಂತಲೇ ಹಸುಗಳನ್ನು ಮೇಯಲು ಬಿಟ್ಟಿಲ್ಲ. ಅವೇ ಬಂದಿರಬಹುದು, ಸಮಯಕ್ಕೆ ಸರಿಯಾಗಿ ಹಾಲು ಕರಿಯದಿದ್ದರೆ ಕೆಚ್ಚಲು ಬಾವು ಬರುತ್ತದೆ. ನಮ್ಮ ಜೀವನವೇ ಪಶುಪಾಲನೆಯಿಂದ ನಡೆಯುತ್ತದೆ. ಇದರಿಂದ ಹಸುಗಳ ಜೀವಕ್ಕೆ ಅಪಾಯವಿದೆ ಎಂದು ಅಂಗಲಾಚಿ ಬೇಡಿದರು, ಮನವಿಗೆ ಬೆಲೆ ಕೊಡದೆ ರಾತ್ರಿ 10.30 ರವರೆಗೂ ಹಸುಗಳನ್ನು ಕೂಡಿಹಾಕಿದ್ದಾರೆ.
ಸಿಪಿಐ ಯೋಗೀಶ್ ಮಾತನಾಡಿ ಬೇಲೂರು ಪೊಲೀಸ್ ವತಿಯಿಂದ ಹಲವಾರು ವರ್ಷಗಳಿಂದ ಆವರಣದೊಳಗೆ ಗಿಡಗಳನ್ನು ಬೆಳಸಲಾಗಿದೆ. ಆದರೆ, ಕೆಲವು ತಿಂಗಳಿಂದ ಹಸುಗಳು ಬಂದು ಗಿಡಗಳನ್ನು ತಿಂದು ಹಾಕುತ್ತಿವೆ. ನಮ್ಮ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಹಸುಗಳನ್ನು ಕಟ್ಟಿ ಹಾಕಿದ್ದೇವು. ನಂತರ ಮನವಿ ಮೇರೆಗೆ ಬಿಟ್ಟು ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.