Political news: ಇಂದು 17ನೇ ಬಾರಿಗೆ ಬಜೆಟ್ ಮಂಡನೆ ಮಾಡಿ, ದಾಖಲೆ ಬರೆದಿಸಿರುವ ಸಿಎಂ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
2005 ರಲ್ಲಿ ಮನರೇಗಾ ಯೋಜನೆಯಡಿ ಪೂರ್ಣ ಅನುದಾನ ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಆದರೆ ಪ್ರಸ್ತುತ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದು, ಕೇಂದ್ರ ಸರ್ಕಾರ ಶೇ. 60 ಮತ್ತು ರಾಜ್ಯ ಶೇ. 40 ರಷ್ಟು ಅನುದಾನವನ್ನು ನೀಡಬೇಕೆಂದು ಸೂಚಿಸಿದ್ದಾರೆ. ಕೇಂದ್ರದ ಈ ಕಾಯ್ದೆಯಿಂದ ರಾಜ್ಯಗಳಿಗೆ ಆಗುವ ಅನಾಹುತಗಳ ಬಗ್ಗೆ ಬಜೆಟ್ ನಲ್ಲಿ ತಿಳಿಸಲಾಗಿದೆ. 12.16 ಕೋಟಿ ದೀನದಲಿತರು, ಬಡ ಕಾರ್ಮಿಕರು, ಮಹಿಳೆಯರಿಗೆ ಉಪಯೋಗವಾಗುತ್ತಿತ್ತು. ಕರ್ನಾಟಕದಲ್ಲಿ ವರ್ಷದ 100 ದಿನಗಳು 77 ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ಜನರ ಉದ್ಯೋಗದ ಹಕ್ಕನ್ನು ವಿಬಿ ಜಿ ರಾಮ್ ಜಿ ಕಸಿದುಕೊಂಡಿದೆ. ಗ್ರಾಮ ಸಭೆಗಳಿಗೆ ನೀಡಿರುವ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಸಂವಿಧಾನದ 73ನೇ ಕಲಂಗೆ ಚ್ಯುತಿ ಮಾಡಿದಂತಾಗಿದೆ. ಈ ಕಾಯ್ದೆಯನ್ನು ರದ್ದುಗೊಳಿಸಿ, ಮನರೇಗಾ ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ. ಈ ಕಾಯ್ದೆಯಿಂದ ರಾಜ್ಯ ಸರ್ಕಾರಕ್ಕೆ 3,000 ಕೋಟಿ ರೂ.ಗಳ ಹೆಚ್ಚಿಗೆ ಆರ್ಥಿಕ ಹೊರೆ ಬೀಳಲಿದೆ ಎಂದು ಸಿಎಂ ಹೇಳಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುದೆಂದು ತಿಳಿಸಲಾಗಿದೆ. ಕಾರಣಾಂತರಗಳಿಂದ ವಿಳಂಬಗಳಾಗಿದ್ದು, ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ವಿಳಂಬವಾದ ಕಾರಣ, ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ರಾಜ್ಯದ ಅಭಿವೃದ್ಧಿ ಮತ್ತು ಪ್ರಾದೇಶೀಕ ಅಸಮತೋಲನ ನಿವಾರಿಸಲು ಪ್ರೊ.ಎಂ.ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳನ್ನು ಸಚಿವ ಸಂಪುಟ ಅಂಗೀಕರಿಸಿದ್ದು, ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಈ ಶಿಫಾರಸ್ಸುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದ್ದು, ಈ ವರ್ಷ ₹4,291 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2026-27 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ₹5,000 ಕೋಟಿ ರೂ.ಗಳ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ವರ್ಷ ₹4,000 ಕೋಟಿ ಖರ್ಚಾಗಿದ್ದು, ಉಳಿದ ಅನುದಾನವನ್ನು ಖರ್ಚು ಮಾಡಲಾಗುವುದು.
ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಅನುಷ್ಠಾನಗೊಳಿಸುವ ಸಂಬಂಧ, ಡ್ಯಾಂನ ಎತ್ತರವನ್ನು ಹೆಚ್ಚಿಸಿದಾಗ ಮುಳುಗಡೆಯಾಗುವ ಜಮೀನುಗಳಿಗೆ ಪರಿಹಾರ ನೀಡಲಾಗುವುದು. 1 ಲಕ್ಷ ಎಕರೆ ಮುಳುಗಡೆಯಾಗುತ್ತಿದ್ದು, ಪರಿಹಾರ ನೀಡಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಖುಷ್ಕಿ ಜಮೀನಿಗೆ 30 ಲಕ್ಷ , ನೀರಾವರಿ ಜಮೀನಿಗೆ 40 ಲಕ್ಷ ಪರಿಹಾರ ನೀಡಲು ನಿರ್ಣಯ ಕೈಗೊಂಡಿದ್ದು, 4 ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಪೂರಕ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಎಲ್ಲ ಗೇಟುಗಳು ಶಿಥಿಲವಾಗಿದ್ದು, ಜೂನ್ ತಿಂಗಳೊಳಗೆ ಎಲ್ಲ ಗೇಟುಗಳನ್ನು ಬದಲಾಯಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಿಂದಿನ ಬಜೆಟ್ ಗಳಂತೆ ಈ ವರ್ಷದ ಆಯವ್ಯಯದಲ್ಲಿ ಕೂಡ ವಿತ್ತೀಯ ಶಿಸ್ತು ಪಾಲನೆ ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಮೀಸಲಿಟ್ಟ ಅನುದಾನ ನೀಡಿದ್ದರೆ, ರಾಜ್ಯಕ್ಕೆ ಕೊರತೆಯಾಗುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.
ಕರಾವಳಿ ಪ್ರವಾಸೋದ್ಯಮಕ್ಕೆ ಬಿಜೆಪಿಯವರು ಅವರ ಅವಧಿಯಲ್ಲಿ ಏನೂ ಮಾಡಲಿಲ್ಲ. ಟೀಕೆ ಮಾಡುವುದು ಸುಲಭ . ಬಿಜೆಪಿಯವರಿಗೆ ನಮ್ಮನ್ನ ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ. 16 ವರ್ಷದ ಮಕ್ಕಳಿಗೆ ಮೊಬೈಲ್ ಇದ್ದರೂ, ಸೋಷಿಯಲ್ ಮೀಡಿಯಾ ನಿರ್ಬಂಧಿಸಲಾಗಿದೆ. ಇದಕ್ಕೆ ಬೇಕಾದ ನೀತಿ ನಿಯಮಗಳನ್ನು ಸಧ್ಯದಲ್ಲಿಯೇ ರೂಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.




