Political News: ಕರ್ನಾಟಕದ ಇತಿಹಾಸದಲ್ಲೇ ಕಪ್ಪು ಚುಕ್ಕೆ: ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಹತ್ಯೆ!

Political News: ಸ್ಪೀಕರ್ ಯು.ಟಿ.ಖಾದರ್ ಅವರು ಇಂದು ಸದನದಿಂದ ಆಚೆ ನಡೆದಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು,  ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ವತಃ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಅಸಹಾಯಕರಾಗಿ ಸದನದಿಂದ ಹೊರನಡೆದು ಕಲಾಪವನ್ನು ಮುಂದೂಡಬೇಕಾಯಿತು. ಇದಕ್ಕೆ ಕಾರಣ? ಕಾಂಗ್ರೆಸ್ ಸರ್ಕಾರದ ಸಚಿವರ ಅಹಂಕಾರ ಮತ್ತು ಬೇಜವಾಬ್ದಾರಿ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಕನಿಷ್ಠ ಲಿಖಿತ ಉತ್ತರ ನೀಡಲೂ ಯೋಗ್ಯತೆ ಇಲ್ಲದ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ವಿಧಾನಸಭೆಯಲ್ಲಿ ಇಂದು ನಡೆದ ಘಟನೆ ಕೇವಲ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಜನಾದೇಶಕ್ಕೆ ಮಾಡಿದ ಘೋರ ಅಪಚಾರ. ದೆಹಲಿಯಲ್ಲಿ “ಸಂವಿಧಾನ ಉಳಿಸಿ” ಎಂದು ಬೊಬ್ಬೆ ಹೊಡೆಯುವ ರಾಹುಲ್ ಗಾಂಧಿ ಅವರೇ, ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೆಸ್ ಪಕ್ಷದ ಸಚಿವರು ವಿಧಾನಸಭೆಯ ಘನತೆಯನ್ನು ಕುಗ್ಗಿಸುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯ, ವ್ಯವಧಾನ ಇಲ್ಲದ ಅಸಮರ್ಥ ಮತ್ತು ಬೇಜವಾಬ್ದಾರಿ ಸಚಿವರು ಸಿದ್ದರಾಮಯ್ಯನವರ ಸಂಪುಟದಲ್ಲಿ ಇದ್ದಾರೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ. ಇದು ಸಿಎಂ ಸಿದ್ದರಾಮಯ್ಯನವರಿಗೆ ಸಚಿವರ ಮೇಲೆ, ಅಧಿಕಾರಶಾಹಿ ಮೇಲೆ, ರಾಜ್ಯದ ಆಡಳಿತದ ಮೇಲೆ ಹಿಡಿತ ತಪ್ಪಿರುವುದಕ್ಕೆ ಸಾಕ್ಷಿ. ಸಚಿವರು, ಅಧಿಕಾರಿಗಳು ಶಾಸಕಾಂಗವನ್ನೇ ನಿರ್ಲಕ್ಷಿಸುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದರ್ಥ ಎಂದು ಆರ್.ಅಶೋಕ್ ಹೇಳಿದ್ದಾರೆ.

ಚುನಾಯಿತ ಜನಪ್ರತಿನಿಧಿಗಳಾದ ಶಾಸಕರ ಪ್ರಶ್ನೆ ಕೇಳುವ ಧ್ವನಿಯನ್ನು ಅಡಗಿಸುವುದು, ಸದನಕ್ಕೆ ಗೌರವ ನೀಡದಿರುವುದು – ಇದೇನಾ ಕಾಂಗ್ರೆಸ್‌ ಪಕ್ಷದ “ಕರ್ನಾಟಕ ಮಾಡೆಲ್’? ಸಂವಿಧಾನದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಇವತ್ತು ಕರ್ನಾಟಕದಲ್ಲಿ ಕಳಚಿ ಬಿದ್ದಿದೆ ಎಂದು ಅಶೋಕ್ ವ್ಯಂಗ್ಯವಾಾಡಿದ್ದಾರೆ.

About The Author