Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ವಿರುದ್ಧ ಎಕ್ಸ್ ಮೀಡಿಯಾದಲ್ಲಿ ಮಾತನಾಡಿದ್ದು, ಕೆಲ ವಿಷಯವಾಗಿ ಚರ್ಚೆಗೆ ಬನ್ನಿ ಎಂದು ಸವಾಲ್ ಹಾಕಿದ್ದಾರೆ.
ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯಅವರೇ, ಆಯವ್ಯಯ ಶ್ವೇತಪತ್ರವಲ್ಲ, ದೀರ್ಘಾವಧಿ ಬಜೆಟ್ ಮಂಡನೆ ಸಾಧನೆಯೂ ಅಲ್ಲ, ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದೇ ನಿಮ್ಮ ಸಾಧನೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬ ನನ್ನ ಹೇಳಿಕೆಯಿಂದ ನೀವು ಸಂಪೂರ್ಣ ವಿಚಲಿತರಾಗಿದ್ದೀರಿ. ನಿಮ್ಮ ಸುದೀರ್ಘ ಸ್ಪಷ್ಟನೆಯ ಹಿಂದೆ ನಿಮ್ಮ ಪ್ರಯಾಸ, ಪಡಿಪಾಟಲು ಕಂಡು ಮರುಕುವುಂಟಾಯಿತು. ಹಾಂ, 17 ಬಾರಿ ಬಜೆಟ್ ಮಂಡಿಸಿರುವುದನ್ನೇ ದೊಡ್ಡ ಸಾಧನೆ ಎಂದುಕೊಂಡಿರುವ ನಿಮಗೆ, ಆಯವ್ಯಯಕ್ಕೂ ಮತ್ತು ಶ್ವೇತಪತ್ರಕ್ಕೂ ಇರುವ ವ್ಯತ್ಯಾಸವೇ ತಿಳಿದಿಲ್ಲದಿರುವುದು ರಾಜ್ಯದ ದುರಂತ. ಶ್ವೇತ ಪತ್ರವೆಂದರೆ ಕಪ್ಪು ಚುಕ್ಕೆಯಿಲ್ಲದ ನಿಖರ ಅಂಶಗಳನ್ನು ಜನರ ಮುಂದಿಡುವುದು. ಈ ವ್ಯತ್ಯಾಸ ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ಇಲಾಖೆಯ ಆರ್ಥಿಕ ತಜ್ಞರಿಂದ ತಿಳಿದುಕೊಳ್ಳಿ ಎಂದು ವಿಜಯೇಂದ್ರ ಸಿಎಂರನ್ನು ಕುರಿತು ವ್ಯಂಗ್ಯವಾಡಿದ್ದಾರೆ.
ಇಷ್ಟಕ್ಕೂ ಬಜೆಟ್ ಮಂಡನೆಯೇ ದೊಡ್ಡ ಸಾಧನೆ ಆಗುತ್ತದೆಯೇ? ಅದು ಹೆಚ್ಚೆಂದರೆ ದಾಖಲೆಯಷ್ಟೆ, ಸಾಧನೆಯಲ್ಲ. ಇಷ್ಟೂ ಬಜೆಟ್ನಲ್ಲಿ ಜನ ಶಾಶ್ವತವಾಗಿ ನೆನೆಪಿಸಿಕೊಳ್ಳುವಂಥ ಯಾವುದಾದರೂ ಜನಪರ ಯೋಜನೆ ಇದಿಯಾ? ಅದನ್ನು ನೀವು ಪಟ್ಟಿ ಮಾಡಿಯೇ ಇಲ್ಲ. ಘೋಷಿಸಿದ್ದರೆ ತಾನೆ ಪಟ್ಟಿ ಮಾಡುವುದು? ಎಂದು ವಿಜಯೇಂದ್ರ ಹೇಳಿದ್ದು, 8 ವಿಷಯಗಳ ಬಗ್ಗೆ ಮಾತನಾಡಿ, ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲ್ ಹಾಕಿದ್ದಾರೆ. ಚರ್ಚೆ ವಿಷಯ ಇಂತಿದೆ.
1. ಹದಗೆಟ್ಟ ಆರ್ಥಿಕ ಸ್ಥಿತಿ – ಹಿರಿಯರಿಗೂ ಇಲ್ಲ ಪಿಂಚಣಿ: ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ವಾದಿಸುವ ಮುಖ್ಯಮಂತ್ರಿಗಳೇ, ಬೆರಳೆಣಿಕೆಯಷ್ಟಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲು ಪಿಂಚಣಿ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು ಯಾಕೆ? ನಿಮ್ಮ ಅಂಕಿ-ಅಂಶಗಳು ಕೇವಲ ಕಾಗದದ ಮೇಲಿವೆ, ವಾಸ್ತವದಲ್ಲಿ ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?
2. ಅಭಿವೃದ್ಧಿ ಶೂನ್ಯ, ಸಾಲದ ಹೊರೆ ಹೆಚ್ಚು: ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಕುಖ್ಯಾತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನವನ್ನು ಜನರು ನಂಬುವುದಿಲ್ಲ. ಜಿಎಸ್ಟಿ ಪಾಲು ಮತ್ತು ಅನುದಾನ ಪಡೆಯಲು ಸಮರ್ಪಕ ವರದಿ ಸಲ್ಲಿಸುವಲ್ಲಿ ವಿಫಲವಾಗಿರುವ ನಿಮ್ಮ ಸರ್ಕಾರ, ತನ್ನ ದೋಷಪೂರಿತ ನಿರ್ಧಾರಗಳನ್ನು ಮುಚ್ಚಿಹಾಕಲು ಕೇಂದ್ರದತ್ತ ಬೆರಳು ಮಾಡುತ್ತಿದೆ. ನೀವು ಮಾಡಿರುವ ಒಟ್ಟು ಸಾಲದ ಮೊತ್ತ 8.14 ಲಕ್ಷ ಕೋಟಿ ಗಡಿ ದಾಟಿದೆ. 2025-26ನೇ ಆರ್ಥಿಕ ವರ್ಷದಲ್ಲಿ 48 ಸಾವಿರ ಕೋಟಿ ರೂ. ಬಡ್ಡಿ ಪಾವತಿಸಿದ್ದೀರಿ. ಸಾಲದ ಮೊತ್ತ ಏರುತ್ತಲೇ ಇದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಇದು ಆರ್ಥಿಕ ದಿವಾಳಿತನವಲ್ಲವೇ?
3. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳಿಗೆ ದ್ರೋಹ: ಪಂಚ ಗ್ಯಾರಂಟಿಗಳಿಗಾಗಿ ಎಸ್ಸಿಪಿ/ಟಿಎಸ್ಪಿ (SCP/TSP) ನಿಧಿಯನ್ನು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಹಣವನ್ನು ಬಳಸಿಕೊಳ್ಳುವ ಮೂಲಕ ಆ ಸಮುದಾಯಗಳಿಗೆ ನಿಮ್ಮ ಕಾಂಗ್ರೆಸ್ ಪರಮ ದ್ರೋಹ ಎಸಗಿದೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ದಿಟ್ಟ ನಿರ್ಧಾರಗಳನ್ನು ರಕ್ಷಿಸಲಾಗದೆ, ಒಳಮೀಸಲಾತಿ ಹೆಸರಿನಲ್ಲಿ ಸಮುದಾಯಗಳ ನಡುವೆ ವಿಷಬೀಜ ಬಿತ್ತಿ ಕುತಂತ್ರ ರಾಜಕಾರಣ ಮಾಡುತ್ತಿದ್ದೀರಿ.
4. ನಿರುದ್ಯೋಗ ಮತ್ತು ಭ್ರಷ್ಟಾಚಾರ: ರಾಜ್ಯದಲ್ಲಿ ಸುಮಾರು 2,85,000 ಸರ್ಕಾರಿ ಹುದ್ದೆಗಳು ಖಾಲಿ ಇವೆ. ಉದ್ಯೋಗ ಭರ್ತಿ ಮಾಡಲು ಹಣವಿಲ್ಲದೆ ಲಕ್ಷಾಂತರ ಯುವಕರ ಭವಿಷ್ಯವನ್ನು ಮಸುಕಾಗಿಸಿದ್ದೀರಿ,ಮುಂದಿನ ಐದು ವರ್ಷಗಳಲ್ಲಿ ಸುಮಾರು 86 ಸಾವಿರ ನೌಕರರು ನಿವೃತ್ತರಾಗಲಿದ್ದಾರೆ. ಪರಿಶಿಷ್ಟ ಜಾತಿಗಳ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ, ಕೃಷಿ, ಅರಣ್ಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಂಥ ಇಲಾಖೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇಲ್ಲೆಲ್ಲಾ ಹೇಗೆ ಕೆಲಸ ನಡೆಯುತ್ತಿದೆಯೋ ಆ ದೇವರೇ ಬಲ್ಲ. ಇಷ್ಟರ ನಡುವೆ 56 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಭರವಸೆ ತೋರಿಸುತ್ತಲೇ, ಆ ಪ್ರಕ್ರಿಯೆಯನ್ನೂ ಮುಂದೂಡುತ್ತಲೇ ಇರುವಿರಿ. ಚುನಾವಣೆ, ಒಳಮೀಸಲು- ಹೀಗೆ ನೂರೆಂಟು ನೆಪ ನೀಡುತ್ತಿರುವಿರಿ,ಇದರಿಂದ ನಿರುದ್ಯೋಗಿ ಅಭ್ಯರ್ಥಿಗಳು ಮತ್ತೆ ಬೀದಿಗಿಳಿದಿದ್ದಾರೆ,ಅವರ ರೊಚ್ಚು,ಆಕ್ರೋಶ ನಿಮ್ಮನ್ನು ಸುಮ್ಮನೇ ಬಿಡದು.
5. ಖಾಲಿಯಾಗಿರುವ ಖಜಾನೆ ತುಂಬಿಸಿಕೊಳ್ಳಲು ಪ್ರತಿ 5೦೦ ಮೀಟರ್ ಗೊಂದು ವೈನ್ಸ್ ಸ್ಟೋರ್, ಬಾರ್ ಗಳನ್ನು ತೆರೆದು ಕರ್ನಾಟಕವನ್ನು ಹೆಂಡದ ರಾಜ್ಯವನ್ನಾಗಿ ಮಾಡಿದ್ದೀರಿ ಇದನ್ನು ನಿಮ್ಮ ಆರ್ಥಿಕ ತಜ್ಞತೆಯ ಪಾಂಡಿತ್ಯ ಎಂದು ಹೊಗಳ ಬೇಕೇ?5. ಖಾಲಿಯಾಗಿರುವ ಖಜಾನೆ ತುಂಬಿಸಿಕೊಳ್ಳಲು ಪ್ರತಿ 5೦೦ ಮೀಟರ್ ಗೊಂದು ವೈನ್ಸ್ ಸ್ಟೋರ್, ಬಾರ್ ಗಳನ್ನು ತೆರೆದು ಕರ್ನಾಟಕವನ್ನು ಹೆಂಡದ ರಾಜ್ಯವನ್ನಾಗಿ ಮಾಡಿದ್ದೀರಿ ಇದನ್ನು ನಿಮ್ಮ ಆರ್ಥಿಕ ತಜ್ಞತೆಯ ಪಾಂಡಿತ್ಯ ಎಂದು ಹೊಗಳ ಬೇಕೇ?
6. ಮಕ್ಕಳಿಗಿಲ್ಲ ಹಾಸ್ಟೆಲ್ ಭಾಗ್ಯ: ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿ ಬರುವ ಒಟ್ಟು ಹಾಸ್ಟೆಲ್ ಗಳಿಗೆ ಸೀಟು ಬಯಸಿ ಅರ್ಜಿ ಸಲ್ಲಿಸಿರುವ ಮಕ್ಕಳ ಪೈಕಿ ಶೇ.60ರಷ್ಟು ವಿದ್ಯಾರ್ಥಿಗಳಿಗೆ ಸೀಟೇ ಸಿಕ್ಕಿಲ್ಲ. ಹಾಸ್ಟೆಲ್ ಸಿಗದ ಎಲ್ಲರಿಗೂ 1500 ರೂ. ವಿದ್ಯಾಸಿರಿಯೂ ಸಿಗುತ್ತಿಲ್ಲ. ಹಿಂದುಳಿದ ವರ್ಗಗಳ ಮಕ್ಕಳಿಗೆ ಸ್ಕಾಲರ್ ಶಿಪ್ ಕೂಡ ನೀಡಿಲ್ಲ. 1.60 ಲಕ್ಷ ಮಕ್ಕಳಿಗೆ ಇನ್ನೂ ಸ್ಕಾಲರ್ ಶಿಪ್ ಬಾಕಿ ಇದೆ. ಆದರೂ ತಾವು ಹೋದಲ್ಲಿ-ಬಂದಲ್ಲಿ ಸರ್ಕಾರದ ಆರ್ಥಿಕ ಸ್ಥಿತಿ ಗಟ್ಟಿ ಇದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವಿರಿ. ಆ ಮಕ್ಕಳ ನೋವಿನ ನಿಟ್ಟಿಸಿರು ತಮ್ಮ ಅಹಿಂದ ಸರ್ಕಾರವನ್ನು ತಟ್ಟದೇ ಬಿಡದು.
7. ಶೈಕ್ಷಣಿಕ ವಲಯದ ಕಗ್ಗೊಲೆ: ತಿಂಗಳುಗಳಿಂದ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡದೆ ಅವರ ಕುಟುಂಬಗಳನ್ನು ಬೀದಿಗೆ ತಂದಿದ್ದೀರಿ. ಜ್ಞಾನ ದಾಸೋಹಿಗಳ ಬದುಕನ್ನು ಅತಂತ್ರಗೊಳಿಸಿದ ಅಪಖ್ಯಾತಿ ನಿಮ್ಮ ಸರ್ಕಾರಕ್ಕೆ ಸಲ್ಲುತ್ತದೆ.
8. ರೈತರಿಗೆ ‘ಘೋಷಣೆ’ ಭಾಗ್ಯ ಮಾತ್ರ: ಕೃಷ್ಣಾ ಮೇಲ್ದಂಡೆ ಯೋಜನೆಗೆ (UKP) ಭೂಮಿ ಕಳೆದುಕೊಂಡು ಮುಳುಗಡೆ ಸಂತ್ರಸ್ತರಾದ ರೈತರಿಗೆ ಪರಿಹಾರ ನೀಡುವುದಾಗಿ ದೊಡ್ಡದಾಗಿ ಘೋಷಿಸಿದಿರಿ. ಆದರೆ ಈವರೆಗೂ ಆ ಭರವಸೆ ಈಡೇರಿಲ್ಲ. ಅನ್ನದಾತನ ಹೊಟ್ಟೆ ಮೇಲೆ ಹೊಡೆಯುತ್ತಿರುವ ನಿಮಗೆ ಆರ್ಥಿಕತೆಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?
ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿ ಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಜನರ ಮುಂದೆ ಚರ್ಚಿಸೋಣ ಎಂದು ವಿಜಯೇಂದ್ರ ಸವಾಲ್ ಹಾಕಿದ್ದಾರೆ.
ಗೌರವಾನ್ವಿತ ಮುಖ್ಯಮಂತ್ರಿ @siddaramaiah ಅವರೇ, ಆಯವ್ಯಯ ಶ್ವೇತಪತ್ರವಲ್ಲ, ದೀರ್ಘಾವಧಿ ಬಜೆಟ್ ಮಂಡನೆ ಸಾಧನೆಯೂ ಅಲ್ಲ, ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದೇ ನಿಮ್ಮ ಸಾಧನೆ
ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬ ನನ್ನ ಹೇಳಿಕೆಯಿಂದ ನೀವು ಸಂಪೂರ್ಣ ವಿಚಲಿತರಾಗಿದ್ದೀರಿ. ನಿಮ್ಮ ಸುದೀರ್ಘ ಸ್ಪಷ್ಟನೆಯ ಹಿಂದೆ…
— Vijayendra Yediyurappa (@BYVijayendra) April 1, 2026




