Political News: ಬೆಂಗಳೂರಿನ ಬಳಗೆರೆ ರಸ್ತೆ ಬಳಿ ರಸ್ತೆ ಗುಂಡಿ ಬಿದ್ದು, ವಾಹನಗಳು ವಾಲಿದ್ದು, ವಾಹನದಲ್ಲಿರುವವರೆಲ್ಲ, ಬಾಗಿಲ ಮೂಲಕ ಆಚೆ ಹಾರಬೇಕಾಯಿತು. ಸ್ವಲ್ಪ ಬ್ಯಾಲೆನ್ಸ್ ತಪ್ಪಿದ್ದರೂ, ಅಪಘಾತವಾಗುವ ಎಲ್ಲ ಸಂಭವವಿತ್ತು. ಆದರೆ ವಾಹನ ಚಾಲಕರ ಮುನ್ನೆಚ್ಚರಿಕೆಯಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ನೋಡಿ ಸ್ವಾಮಿ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಅವಸ್ಥೆ. ಉದ್ಯೋಗ, ವ್ಯಾಪಾರಕ್ಕೆ ದಿನನಿತ್ಯ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗುವ ಜನಸಾಮಾನ್ಯರು ವಾಪಸ್ಸು ಬರುವ ತನಕ ಮನೆಯವರು ಜೀವ ಕೈಯಲ್ಲಿ ಹಿಡಿದುಕೊಂಡು ಭಯಪಡುವ ಪರಿಸ್ಥಿತಿ ಈಗಾಗಲೇ ಇದೆ ಎಂದು ಅಶೋಕ್ ಹೇಳಿದ್ದಾರೆ.
ಈಗ ಬಸ್ಸು, ವ್ಯಾನುಗಳಲ್ಲಿ ಶಾಲೆಗೆ ಹೋಗುವ ಮಕ್ಕಳೂ ಸಹ ಮನೆಗೆ ಬರುವ ತನಕ ತಂದೆ ತಾಯಂದಿರು ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಕೈಮುಗಿಯುವ ಪರಿಸ್ಥಿತಿ ಬಂದಿದೆ. ಇವತ್ತು ರಸ್ತೆ ಗುಂಡಿಗೆ ಶಾಲಾ ಬಸ್ ಬಿದ್ದು ಅದೃಷ್ಟವಶಾತ್ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಬೆಂಗಳೂರಿನ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಿ. ನಿಮ್ಮ ಸ್ಕೈ ಡೆಕ್, ಟನಲ್ ರಸ್ತೆ ಶೋಕಿ ಸ್ವಲ್ಪ ಪಕ್ಕಕ್ಕಿಡಿ. ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಶೋಕ್ ಟಾಂಗ್ ನೀಡಿದ್ದಾರೆ.