Political News: ಕಾಂಗ್ರೆಸ್ ಎಂದಿಗೂ ಜಾತಿ, ಧರ್ಮ ರಾಜಕಾರಣ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

Political News: ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್- ಬಿಜೆಪಿ ಮಧ್ಯೆ ಜೋರಾದ ಪೈಪೋಟಿ ಏರ್ಪಟ್ಟಿದೆ.

ಈ ಮಧ್ಯೆ ದಾವಣಗೆರೆಯಲ್ಲಿ ತಮಗೆ ಟಿಕೇಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಮುಸ್ಲಿಂ ಸಮುದಾಯದವರಿಗೆ ನಿರಾಸೆ ಉಂಟಾಗಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸಮರ ಸಾರಲು ಟಿಕೇಟ್ ಆಕಾಂಕ್ಷಿ ಪೈಲ್ವಾಾನ್ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಎಂದಿಗೂ ಜಾತಿ, ಧರ್ಮ ರಾಜಕಾರಣ ಮಾಡಿಲ್ಲ. ರೈತರು, ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಎಲ್ಲ ಸಮುದಾಯವನ್ನು ಒಳಗೊಂಡ ಪಕ್ಷ ಕಾಂಗ್ರೆಸ್. ನಾವು ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ.

ಜನಪ್ರತಿನಿಧಿಗಳು ನಿಧನರಾದಾಗ ಸಾಮಾನ್ಯವಾಗಿ ಆ ಕುಟುಂಬದ ಸದಸ್ಯರಿಗೆ ಅವಕಾಶ ನೀಡುವುದು ಕಾಂಗ್ರೆಸ್ ಪಕ್ಷದ ವಾಡಿಕೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೇಟಿ ಹಾಗೂ ಶಾಮನೂರು ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಉಪಚುನಾವಣೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ‌ ಬಸವರಾಜ ಬೊಮ್ಮಾಯಿ ಅವರ ಪುತ್ರರನ್ನೇ ನಾವು ಸೋಲಿಸಿಲ್ಲವೇ? ಎಂದು ಸಿಎಂ ಪ್ರಶ್ನಿಸಿದ್ದಲ್ಲದೇ, ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

About The Author