Political News: ಆರೋಗ್ಯದಿಂದ ಅನಾರೋಗ್ಯದತ್ತ – ಹಳಿತಪ್ಪಿದ ಕರ್ನಾಟಕದ ಆಡಳಿತ: ಸಿ.ಟಿ.ರವಿ

Political News:  ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ|| ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿ ನೇಮಿಸುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಧಿಕೃತ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಈ ಕಾರಣಕ್ಕೆ ಬಿಜೆಪಿ ನಾಯಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲಿಯ ಆರೋಗ್ಯ ಇಲಾಖೆ? ಎಲ್ಲಿಯ ಅಬಕಾರಿ ಇಲಾಖೆ? ಇಂತಹ ವರ್ಗಾವಣೆ ನಿಯಮಕ್ಕೆ ವಿರುದ್ಧ ಎನ್ನುವ ಅರಿವೂ ಸ್ವತಃ ಮುಖ್ಯಮಂತ್ರಿಗಳಿಗೆ ಇಲ್ಲವೇ? ತನಗೆ ಎಲ್ಲ ಕಾನೂನು ಗೊತ್ತು, ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವ ಸಿದ್ದರಾಮಯ್ಯನವರಿಗೆ ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡುವ ಆಲೋಚನೆ ಎಲ್ಲಿಂದ ಬಂತೋ?!ಎಂದು ರವಿ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆಯಿದೆ. ಸರ್ಕಾರಿ ಆಸ್ಪತ್ರೆಗಳಂತೂ ಔಷಧಗಳ ಕೊರತೆಯಿಂದ ನರಳುತ್ತಿವೆ. ಪರಿಸ್ಥಿತಿ ಹೀಗಿದ್ದೂ, ಇಂತಹ ಅವೈಜ್ಞಾನಿಕ ವರ್ಗಾವಣೆಗೆ ಮುಖ್ಯಮಂತ್ರಿಗಳೇ ನಿರ್ದೇಶನ ನೀಡಲು ಹೇಗೆ ಸಾಧ್ಯ? ಎಂದು ಮಾಜಿ ಶಾಸಕರು ಪ್ರಶ್ನಿಸಿದ್ದಾರೆ.

ಅಬಕಾರಿ ಇಲಾಖೆ ಈಗಾಗಲೇ 6,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಹಗರಣದ ಕೂಪವಾಗಿದೆ. ಇಲಾಖೆಗೆ ಸರ್ಜರಿ ಮಾಡಬೇಕು ಎಂದರೆ, ವೈದ್ಯಾಧಿಕಾರಿಗಳನ್ನು ಅಲ್ಲಿಗೆ ವರ್ಗಾವಣೆ ಮಾಡಬೇಕು ಎಂದರ್ಥವಲ್ಲ! ಬಹುಶಃ ಇದರ ಹಿಂದೆ ಕಾಣದ ‘ಕೈ’ಗಳ ಕೈವಾಡವಿದ್ದರೂ ಇರಬಹುದು!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರ್ಚಿ ಕದನದಲ್ಲಿ ಸಿಲುಕಿ, ಆಡಳಿತವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ, ಅಥವಾ ಮರೆತೇ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷಿಸುವುದು ಕೇವಲ ಕನಸಿನ ಮಾತು ಎಂದು ರವಿ ವ್ಯಂಗ್ಯವಾಡಿದ್ದಾರೆ.

About The Author