Political News: ಬೆಂಗಳೂರು: ಮುಂಬರುವ ವಿಧಾನ ಪರಿಷತ್ ನ ಪದವಿ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ಸಂಬಂಧಿಸಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಮಂಗಳವಾರ ಸಭೆ ನಡೆಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ವಿಚಾರವಾಗಿ ಪಕ್ಷದ ಪ್ರಮುಖ ಮುಖಂಡರು, ವಿವಿಧ ಘಟಕಗಳ ಮುಖ್ಯಸ್ಥರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮುಂದಿನ ವರ್ಷ ಮೇಲ್ಮನೆಗೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟಾಗಿ ಕೆಲಸ ಮಾಡಬೇಕು ಹಾಗೂ ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ನೋಂದಣಿ ಮಾಡಿಸಬೇಕು ಎಂದು ರಮೇಶ್ ಗೌಡ ಒತ್ತಿ ಹೇಳಿದರು.
ಮೇಲ್ಮನೆಯ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗೆಯೇ ನಿರುದ್ಯೋಗ ಸಮಸ್ಯೆ ತೊಡೆದುಹಾಕಿ ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಮತ್ತು ಯುವನಿಧಿ ಗ್ಯಾರಂಟಿ ಸಮರ್ಪಕ ಜಾರಿಯಲ್ಲಿ ವೈಫಲ್ಯವಾಗಿದೆ ಎಂದು ಅವರು ಆರೋಪ ಮಾಡಿದರು.
ಈ ವಿಷಯಗಳನ್ನು ಇಟ್ಟುಕೊಂಡು ನಾವು ಶಿಕ್ಷಕರನ್ನು ಸಂಘಟಿಸಬೇಕು. ಅವರ ಸಂಕಷ್ಟಗಳನ್ನು ಈಡೇರಿಸಲು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳು, ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಕೊಡುಗೆಗಳನ್ನು ಶಿಕ್ಷಕರಿಗೆ ತಿಳಿಸಬೇಕು ಎಂದು ರಮೇಶ್ ಗೌಡ ಹೇಳಿದರು.
ಈ ಸಭೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್. ಭೋಜೇಗೌಡ, ಶಾಸಕರಾದ ಜವರಾಯಿ ಗೌಡ , ಟಿ.ಎ. ಶರವಣ, ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಪಕ್ಷದ ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್ ಹಾಗೂ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.

