Political News: ಬಿಜೆಪಿ ಮತ್ತು ಜ್ಞಾನೇಶ್ ಕುಮಾರ್ ನಡುವೆ ದೋಸ್ತಿ ಇದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ

Political News: ಸದ್ಯ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಎಸ್‌ಐಆರ್ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭ”ನೆ ನಡೆಸುತ್ತಿದೆ. ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಸೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ಬಗ್ಗೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ನಮ್ಮನ್ನು ರಕ್ಷಿಸುತ್ತೀರಿ, ನಾವು ನಿಮ್ಮನ್ನು ರಕ್ಷಿಸುತ್ತೇವೆ, ಇದು ಬಿಜೆಪಿ ಮತ್ತು ಗ್ಯಾನೇಶ್ ಕುಮಾರ್ ನಡುವಿನ ದೋಸ್ತಿ ಕಥೆ! ಎಂದು ಕಿಡಿಕಾರಿದ್ದಾರೆ.

ಅಲ್ಲದೇ, ಯಾವಾಗ ಸರ್ವಾಧಿಕಾರಿಗೆ ಜನಾಂದೋಲನದ ಭಯ ಶುರುವಾಗುತ್ತದೆಯೋ ಆಗ ಆತ ಜನರನ್ನೇ ಶತ್ರುಗಳಂತೆ ನಡೆಸಿಕೊಳ್ಳಲು ಶುರುಮಾಡುತ್ತಾನೆ. ಪ್ರಸ್ತುತ ಭಾರತದಲ್ಲಿ ಆಗುತ್ತಿರುವುದೂ ಅದೇ, ಜನಬೆಂಬಲ ದೊರಕುವುದಿಲ್ಲ ಎನ್ನುವುದು ಅರಿವಿಗೆ ಬಂದಿರುವಾಗ ಜನಮತ ಇಲ್ಲದೆಯೇ ಅಧಿಕಾರ ಹಿಡಿಯುವ ಹೀನ ತಂತ್ರಕ್ಕೆ ಚುನಾವಣಾ ಆಯೋಗ ಎಂಬ ಪ್ರಜಾಪ್ರಭುತ್ವ ಭಾರತದ ಭರವಸೆ ಎನ್ನುವಂತಹ ಸಂಸ್ಥೆ ವೇದಿಕೆಯಾಗಿರುವುದು ಭಾರತದ ದುರಿತಕಾಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಚುನಾವಣಾ ಆಯೋಗದಂತಹ ಸ್ವಾಯುತ್ತ ಸಂಸ್ಥೆಗಳು ಜನರ ನಂಬಿಕೆಗೆ ಅರ್ಹವಾಗುವಂತೆ ನಡೆದುಕೊಳ್ಳಬೇಕು, ಹಾಗೆ ನಡೆದುಕೊಳ್ಳದಿರುವಾಗ ಚುನಾವಣಾ ಆಯೋಗವನ್ನು ವಿಶ್ವಾಸಾರ್ಹತೆಯ ಸಂಸ್ಥೆಯನ್ನಾಗಿ ಮರುಸ್ಥಾಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಹೊರಡುತ್ತದೆ.. ಏಕೆಂದರೆ, ಭಾರತ ಉಳಿಯಬೇಕಿದೆ..ಉಳಿಸಬೇಕಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.

About The Author