Political News: ಬೆಂಗಳೂರಿನಲ್ಲಿ ಮೆಟ್ರೋ ಬೆಲೆ ಅತೀ ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ, ತೇಜಸ್ವಿ ಸೂರ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರು ಮೆಟ್ರೋ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣದರವನ್ನು ಪ್ರಯಾಣಿಕರ ಮೇಲೆ ಹೇರುತ್ತಿದೆ. ಜನಪ್ರತಿನಿಧಿಗಳ, ಸಾರ್ವಜನಿಕರ ಪ್ರಬಲ ವಿರೋಧದ ಮಧ್ಯೆಯೂ ಈಗಾಗಲೇ ಮೆಟ್ರೋ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದ ಮೂಲಕ ರಾಜ್ಯ ಸರ್ಕಾರ & BMRCL ಸಾರ್ವಜನಿಕರ ಹಣವನ್ನು ಲೂಟಿ ಮಾಡಲು ಹೊರಟಿರುವುದು ದುರಂತ ಎಂದು ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ದರ ನಿಗದಿ ಸಮಿತಿಯ ಶಿಫಾರಸಿನಂತೆ ಈ ಹಿಂದೆ ಮಾಡಿರುವ ದರ ಹೆಚ್ಚಳವೇ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿತ್ತು. ಮುಂಬರುವ ಫೆಬ್ರುವರಿ ತಿಂಗಳಿನಿಂದ ಮಾಡಹೊರಟಿರುವ ಪ್ರಸ್ತಾವಿತ ದುಬಾರಿ ದರದಿಂದ ಸಾಮಾನ್ಯ ನಾಗರಿಕರ ಬದುಕನ್ನು ಇನ್ನಷ್ಟು ಬರ್ಬರಗೊಳಿಸುವ ರಾಜ್ಯ ಸರ್ಕಾರ & BMRCL ನ ಪ್ರಯತ್ನ ಕಳವಳಕಾರಿಯಾಗಿದೆ.
ಬೆಂಗಳೂರು ಮೆಟ್ರೋದ ಪ್ರತಿಯೊಂದು ಕಾಮಗಾರಿಯೂ ಕೂಡ ಅತೀ ಹೆಚ್ಚಿನ ವಿಳಂಬದಿಂದ ಈಗಾಗಲೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. BMRCL ಮಾಡುವ ವಿಳಂಬದಿಂದ ಉಂಟಾಗುವ ಕಾಮಗಾರಿ ವೆಚ್ಚವನ್ನು ದರ ಹೆಚ್ಚಳದ ಮೂಲಕ ಸಾರ್ವಜನಿಕರ ಕೊಳ್ಳೆ ಹೊಡೆಯುತ್ತಿರುವುದು ಯಾವ ನ್ಯಾಯ ? ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ಮೆಟ್ರೋ ದರ ಹೆಚ್ಚಳದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡುವುದು ನಿಶ್ಚಿತ. ಕೇಂದ್ರ ಸರ್ಕಾರ & ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ, ಆರೋಪ, ಪ್ರತ್ಯಾರೋಪಗಳನ್ನು ಬದಿಗಿಟ್ಟು ನಮ್ಮ ಬೆಂಗಳೂರಿನ ನಾಗರಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಾರ್ವಜನಿಕರು ದರ ಏರಿಕೆಯ ವಿರುದ್ಧ ಹೋರಾಟ ಕೈಗೊಳ್ಳುವ ಮುಂಚೆ ನೂತನ ದರ ನಿಗದಿ ಸಮಿತಿಯನ್ನು ರಚನೆ ಮಾಡಿ, ಹೊಸ ದರವನ್ನು ನಿಗದಿಗೊಳಿಸುವ ಮೂಲಕ ಪ್ರತಿನಿತ್ಯ ಮೆಟ್ರೋದಲ್ಲಿ ಪ್ರಯಾಣಿಸುವ ಸಾರ್ವಜನಿಕರ ಹಿತಾಸಕ್ತಿ ಬಗ್ಗೆ ಕಿಂಚಿತ್ತಾದರೂ ಕಾಳಜಿ ವಹಿಸುವಂತೆ ನಾನು CM ಸಿದ್ದರಾಮಯ್ಯ & DyCM ಡಿ.ಕೆ.ಶಿವಕುಮಾರ್ರವರಲ್ಲಿ ಕೋರುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ವಿನಂತಿಸಿದ್ದಾರೆ.




