Political News: ರಾಹುಲ್ ಗಾಂಧಿ ಹರಿಯಾಣಾದಲ್ಲಿ ಮತಗಳ್ಳತನವಾಗಿದೆ ಎಂಬ ಆರೋಪ ಮಾಡಿದ್ದ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಹುಲ್ ಅವರಿಗೆ ಮತ ಮತಿಭ್ರಮಣೆಯಾಗಿದೆ ಎಂದಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದ ಹೀನಾಯ ಸೋಲನ್ನು ಈಗಲೇ ಊಹಿಸಿರುವ ರಾಹುಲ್ ಗಾಂಧಿ ಅವರು ಮೊದಲ ಹಂತದ ಮತದಾನಕ್ಕೆ ಮುನ್ನವೇ ಮೈ ಪರಚಿಕೊಳ್ಳುತ್ತಿದ್ದಾರೆ ! ಹಾಗಾಗಿ, ಸೋಲಿಗೊಂದು ಪೂರ್ವ ನಿರೀಕ್ಷಣಾ ಜಾಮೀನು ಪಡೆಯಲು, ಮತ್ತೆ ಮತ ಕಳವು ಪ್ರಹಸನ ಆರಂಭಿಸಿದ್ದಾರೆ. ನಿರಂತರ ಸೋಲುಗಳು ಅವರನ್ನು ಕಂಗೆಡಿಸಿದೆ. ಕಾಂಗ್ರೆಸ್ ಅಸ್ತಿತ್ವದ ಆತಂಕವೇ ಅವರನ್ನು ಈ ಭೀತಿಗೆ ತಳ್ಳಿದೆ. ಸಂದೇಹವೇ ಬೇಡ, ಅವರೀಗ ಮತ ಮತಿಭ್ರಮಣೆಗೆ ಒಳಗಾಗಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ನಿತ್ಯವೂ ಮತಗಳ್ಳತನದ ಜಪ ನಿರತ ರಾಹುಲ್, ಈಗ ಒಂದು ಹೆಜ್ಜೆ ಮುಂದೆ ಹೋಗಿ ಮತದಾನಕ್ಕೆ ಮುನ್ನವೇ ಮತಗಳ್ಳತನವನ್ನು ಊಹಿಸಿದ್ದಾರೆ. ಇದೊಂದು ರೀತಿ ನಾಳೆ ನಮ್ಮ ಮನೆಯಲ್ಲಿ ಕಳ್ಳತನ ನಡೆಯಲಿಲದೆ ಎಂದು ಅತ್ತಂತೆ! ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗದ ಮೇಲೆ ಹತಾಶೆಯ ಸರಣಿ ಆರೋಪ ಮಾಡುವುದೇ ಅವರ ಕಾಯಕವಾಗಿದೆ. ಇದೆಲ್ಲವೂ ಏನನ್ನು ಹೇಳುತ್ತದೆ? ಬಿಹಾರದಲ್ಲಿ ಮತದಾನಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಯಾರು ಬೇಕಾದರೂ ಮೇಲಿನ ಪ್ರಶ್ನೆಗೆ ಉತ್ತರ ನೀಡಬಹುದು ! ಎಂದು ವಿಜಯೇಂದ್ರ ಹೇಳಿದ್ದಾರೆ.
‘ಹರಿಯಾಣ ಚುನಾವಣೆಯಲ್ಲೂ 25 ಲಕ್ಷ ಮತಕಳವು ಆಗಿದೆ ಎಂಬುದು ಅವರ ನೂರೊಂದನೆಯ ಆರೋಪ. ಸದ್ಯ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಹುರುಳಿಲ್ಲದ ಚುನಾವಣಾ ಅಕ್ರಮದ ಆರೋಪ ಪಟ್ಟಿ ಮುಂದಿಟ್ಟಿರುವ ರಾಹುಲ್ ಅವರು ಇದನ್ನು ಆಧರಿಸಿ ಇದುವರೆಗೂ ಚುನಾವಣಾ ಆಯೋಗಕ್ಕೆ ಯಾಕೆ ದೂರು ಸಲ್ಲಿಸಿಲ್ಲ? ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಲಿಲ್ಲ? ಇದೆಲ್ಲದಕ್ಕಿಂತ ಪ್ರಮುಖವಾಗಿ ಬೂತ್ ಮಟ್ಟದ ಕಾಂಗ್ರೆಸ್ ಏಜೆಂಟರು ಇದುವರೆಗೂ ಮೌನವಾಗಿದ್ದರು ಏಕೆ ? ಮತದಾನ ನಡೆಯುವಾಗ ಅವರ ಬೂತ್ ಮಟ್ಟದ ಕಾಂಗ್ರೆಸ್ ಏಜೆಂಟರು ಮತಗಟ್ಟೆಯಲ್ಲಿ ಇರಲಿಲ್ಲವೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬದಲು, ಎಲ್ಲವನ್ನೂ ಆಯೋಗದ ಮೇಲೆ ಹೊರಿಸುವುದು ದುರ್ಬಲರ ಲಕ್ಷಣ. ಕುಣಿಯಲಾರದವ ನೆಲ ಡೊಂಕು ಎಂಬ ನಾಣ್ಣುಡಿಗೆ ರಾಹುಲ್ ದೊಡ್ಡ ಉದಾಹರಣಣೆಯಾಗಿದ್ದಾರೆ ಎಂದು ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

