Political News: ದಾವಣಗೆರೆ ದಕ್ಷಿಣ ಕಾಂಗ್ರೆಸ್ ಕ್ಷೇತ್ರದ ನಾಯಕ ಶಾಮನೂರು ಶಿವಶಂಕರಪ್ಪ ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ.
94 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಶಂಕರಪ್ಪ ಸಾವನ್ನಪ್ಪಿದ್ದಾರೆ. ಇವರಿಗೆ 94 ವರ್ಷವಾಗಿದ್ದ ಕಾರಣ, ಇವರು ಭಾರತದಲ್ಲೇ ಅತ್ಯಂತ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇನ್ನು ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದು, ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬೆಂಬಲಿಗರಿಗೆ ಈ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಡಿಕೆಶಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಾಡಿನ ಹಿರಿಯ ರಾಜಕಾರಣಿಗಳು, ಮಾಜಿ ಮಂತ್ರಿಗಳು, ಉದ್ಯಮಿಗಳು ಆಗಿದ್ದ ಸರಳ ಸಜ್ಜನಿಕೆಯ ನಾಯಕರಾದ ಶ್ರೀ ಶ್ಯಾಮನೂರು ಶಿವಶಂಕರಪ್ಪನವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ವೈಯಕ್ತಿಕವಾಗಿ ನಾನು ಬಹಳ ಗೌರವಿಸುತ್ತಿದ್ದ ನಾಯಕರು ಅವರಾಗಿದ್ದರು. ರಾಜಕಾರಣ ಮಾತ್ರವಲ್ಲದೆ ಶಿಕ್ಷಣ, ಉದ್ಯಮ, ಸಮಾಜಸೇವೆ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸಿ ಮಾದರಿ ವ್ಯಕ್ತಿತ್ವದ ಸಾಧಕರಾಗಿದ್ದರು. ನೇರ ನಡೆನುಡಿಯ ಅವರು ಸಚಿವರಾಗಿಯೂ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟು ದುಡಿದರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮ ಶಿವನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಂತಾಪ ಸೂಚಿಸಿದ್ದಾರೆ.
ಇನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಸಹ ಈ ಬಗ್ಗೆ ಸಂತಾಪ ಸೂಚಿಸಿದ್ದು, ಹಿರಿಯ ಶಾಸಕರು, ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ರಾಜಕಾರಣ ಮಾತ್ರವಲ್ಲದೆ ಶಿಕ್ಷಣ, ಉದ್ಯಮ, ಸಮಾಜಸೇವೆ ಕ್ಷೇತ್ರಗಳಲ್ಲಿಯೂ ಯಶಸ್ಸುಗಳಿಸಿ ಮಾದರಿ ವ್ಯಕ್ತಿತ್ವದ ಸಾಧಕರಾಗಿದ್ದರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಿಖಿಲ್ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಿಎಂ ಬಸವರಾಜ ಬ“ಮ್ಮಾಯಿ ಸಂತಾಪ ಸೂಚಿಸಿದ್ದು, ಹಿರಿಯ ಶಾಸಕರು ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರ ಶಿವಶಂಕರಪ್ಪ ರವರು ನಿಧನರಾದ ವಿಷಯ ತಿಳಿದು ನನಗೆ ಅತ್ಯಂತ ದುಃಖವಾಯಿತು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಔದ್ಯೋಗಿಕ ಕ್ಷೇತ್ರಗಳಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುವುದರ ಜೊತೆಗೆ ರಾಜ್ಯದ ಶಾಸಕರಾಗಿ ಹಾಗೂ ಸಚಿವರಾಗಿ ದಕ್ಷ ಹಾಗೂ ಪ್ರಾಮಣಿಕತೆಯಿಂದ ಕಾರ್ಯನಿರ್ವಹಿಸಿದ್ದರು. ವಿಶೇಷವಾಗಿ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜವನ್ನು ಮುನ್ನಡೆಸಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ಮತ್ತು ವಿಶೇಷವಾಗಿ ದಾವಣಗೆರೆ ಜಿಲ್ಲೆಗೆ, ವೀರಶೈವ ಸಮಾಜಕ್ಕೆ ಮತ್ತು ನನಗೆ ವಯಕ್ತಿಕವಾಗಿ ತುಂಬಲಾರದ ಹಾನಿಯಾಗಿದೆ. ಅವರ ಅಗಲಿಕೆಯ ದುಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರ ಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಂತಪ ಸೂಚಿಸಿದ್ದಾರೆ.




