Political news: ಜಾತಿಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.
ಮಾನ್ಯ ಸಿದ್ದರಾಮಯ್ಯಯನವರೇ, ಆರು ತಿಂಗಳ ಹಿಂದೆ ಕರ್ನಾಟಕ ಮಾದರಿಯಲ್ಲಿ ಜಾತಿ ಗಣತಿ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ಕೊಟ್ಟಿದ್ದಿರಿ. ವೀರಾವೇಶದ ಭಾಷಣ ಮಾಡಿದ್ದಿರಿ. ಆದರೆ ನಿಮ್ಮ ಕರ್ನಾಟಕ ಮಾಡೆಲ್ ಜಾತಿ ಗಣತಿಯನ್ನು ನಿಮ್ಮದೇ ಹೈಕಮಾಂಡ್ ತಿಪ್ಪೆಗೆ ಎಸೆಯಿತು ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಈಗ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎಐಸಿಸಿ ಹಿಂದುಳಿದ ವರ್ಗದ ಸಭೆಯಲ್ಲಿ ತೆಲಂಗಾಣ ಮಾದರಿಯಲ್ಲಿ ರಾಷ್ಟ್ರಾದ್ಯಂತ ಜಾತಿ ಗಣತಿ ಮಾಡಬೇಕೆಂದು ಕೇಂದ್ರಕ್ಕೆ ಸಲಹೆ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾತು ಕೇಳಿದೆ.ಹಿಂದುಳಿದ ವರ್ಗದ ಛಾಂಪಿಯನ್ ಎಂಬ ಸ್ವಘೋಷಿತ ಬಿರುದನ್ನು ನಿಮ್ಮದೇ ಹೈಕಮಾಂಡ್ ಈಗ ಕಿತ್ತು ಹಾಕಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಆದರೂ ಅಭಿಮಾನ ಶೂನ್ಯರಂತೆ ಈ ಹರಿದ ಪೋಷಾಕು ಧರಿಸಿ ನೀವ್ಯಾಕೆ ಮೆರೆಯುತ್ತಿದ್ದೀರಿ? ಬಿಜೆಪಿಗೆ ಹಿಂದುಳಿದ ವರ್ಗದ ಬಗ್ಗೆ ಕಾಳಜಿ ಇಲ್ಲ ಎಂದು ಪುಗ್ಸಟ್ಟೆ ಭಾಷಣ ಬಿಗಿಯುವುದಕ್ಕೆ ಮುನ್ನ ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಮೇಲಿಟ್ಟ ಕಾಳಜಿಯನ್ನು ಸ್ವಲ್ಪ ಅವಲೋಕಿಸಿ. ದೀಪದ ಬುಡ ಕತ್ತಲಲ್ಲವೇ ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.




