Political News: ಕಬ್ಬು ಬೆಳೆ ವಿಷಯದಲ್ಲಿ ರಾಜ್ಯ ಸರಕಾರ ಜವಾಬ್ದಾರಿ ನಿಭಾಯಿಸಲಿ: ಪ್ರಲ್ಹಾದ್ ಜೋಶಿ

Political News: ಬೆಂಗಳೂರು: ಕಬ್ಬು ಬೆಳೆ ವಿಚಾರದಲ್ಲಿ ರಾಜ್ಯ ಸರಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಲಹೆ ನೀಡಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸದೇ ಕೇಂದ್ರದ ಕಡೆ ಬೆಟ್ಟು ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ವಿಶೇಷವಾಗಿ 2018 ರಿಂದ, 18-19 ರಿಂದ ಎಥೆನಾಲ್ ಅನ್ನ ಬಹಳ ನಿಯಮಿತವಾಗಿ ಖರೀದಿ ಮಾಡುತ್ತಿದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ 38 ಕೋಟಿ ಲೀಟರ್ ಎಥೆನಾಲ್ ಖರೀದಿ ಮಾಡುತ್ತಿತ್ತು. ವಾಜಪೇಯಿ ಅವರ ಕಾಲದಲ್ಲಿ 2003ನೇ ಇಸವಿಯಲ್ಲಿ ಎಥೆನಾಲ್ ಕಾರ್ಯಕ್ರಮ ಶುರುವಾಗಿತ್ತು. ನಾವು ಈಗ 1200 ಕೋಟಿ ಲೀಟರ್ ಎಥೆನಾಲ್ ಖರೀದಿ ಮಾಡುತ್ತೇವೆ ಎಂದು ವಿವರಿಸಿದರು. ನಾವು ನಮ್ಮ ರೈತರಿಗೆ ಅದರ ಹಣ ಪಾವತಿಸಬೇಕೆಂಬ ನಿಯಮ ಮಾಡಿದ್ದೇವೆ. ಹೀಗಾಗಿ ರೈತರ ಪರವಾಗಿ ಮೋದಿ ಸರ್ಕಾರ ಅನೇಕ ನಿರ್ಣಯ ತೆಗೆದುಕೊಂಡಿದೆ ಎಂದು ವಿವರಿಸಿದರು. ಎಂಎಸ್‍ಪಿಯನ್ನೂ ಕೇಂದ್ರ ಸರಕಾರವು ಧನಾತ್ಮಕವಾಗಿ ಪರಿಗಣಿಸುತ್ತಿದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರ ತಾವು ರಾಜ್ಯ ಸಲಹಾ ದರ (ಎಸ್‍ಎಪಿ) ಕೊಡಬೇಕು. ಉತ್ತರ ಪ್ರದೇಶದ ಯೋಗಿ ಸರಕಾರ, ಹರಿಯಾಣ ಸರ್ಕಾರ, ಪಂಜಾಬ್‍ನ ಆಪ್ ಸರ್ಕಾರ, ಉತ್ತರಾಖಂಡ ಸರ್ಕಾರ ಎಸ್‍ಎಪಿ ನೀಡುತ್ತಿವೆ ಎಂದು ಗಮನ ಸೆಳೆದರು.

ಎಸ್‍ಎಪಿ ಕಾನೂನಿದೆ. ಎಸ್‍ಎಪಿ ಕಾನೂನ್ನು 2013 ರಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಜಾರಿ ಆಗಿತ್ತು. ಆ ಎಸ್‍ಎಪಿ ಕಾನೂನಿಗೆ ತಿದ್ದುಪಡಿ ಮಾಡಿ, ಸುಗ್ರೀವಾಜ್ಞೆ ಮೂಲಕವಾಗಿ ನೀವು ಅದನ್ನು ಸರಿಪಡಿಸಿ, ಅವರಿಗೆ ನೀವು ತಕ್ಷಣ ಪರಿಹಾರವನ್ನು ಒದಗಿಸುವಂತಹ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ರೈತರ ಬೇಡಿಕೆಗಳ ಬಗ್ಗೆ ನಾವು ಸಮಿತಿ ರಚಿಸಿದ್ದೇವೆ. ದೇಶದಲ್ಲಿ ಸುಮಾರು 4-5 ರಾಜ್ಯಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆ ಇದೆ. ಸುಮಾರು ಏಳು ರಾಜ್ಯದಲ್ಲಿ ಸ್ವಲ್ಪ ಕಮ್ಮಿ ಇದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಜೊತೆಗೆ ಪ್ರತಿ ಸತಿ ಮಾಹಿತಿ ಪಡೆಯುತ್ತದೆ. ಎಫ್‍ಆರ್‍ಪಿ ನಿಗದಿ ಮಾಡುವ ಮೊದಲು ಪ್ರತಿ ವರ್ಷ ನಾವು ಎಲ್ಲಾ ರಾಜ್ಯ ಸರ್ಕಾರಗಳಿಂದ ನಾವು ಫೀಡ್‍ಬ್ಯಾಕ್ ಪಡೆಯುತ್ತೇವೆ ಎಂದು ತಿಳಿಸಿದರು.

ಈ ಸಮಿತಿ ಅಧ್ಯಯನಕ್ಕೆ ಈಗಾಗಲೇ ಇಲ್ಲಿ ಬಂದು ಹೋಗಿದೆ. ಬೇರೆ ರಾಜ್ಯಗಳು ಮಾಡಿದಂತೆ ಎಸ್‍ಎಪಿ ಕೊಡಬೇಕು ಎಂದರು. ಇಳುವರಿಯಲ್ಲಿ ಬೇರೆ ರಾಜ್ಯಗಳಲ್ಲಿ ಶೇ 3ರಿಂದ 4 ರಷ್ಟು ತ್ಯಾಜ್ಯ (ವೇಸ್ಟೇಜ್) ಎಂದು ಪರಿಗಣಿಸಿದರೆ, ನಮ್ಮಲ್ಲಿ 8 ರಿಂದ 9 ಪಸೆರ್ಂಟ್ ಮಾಡುತ್ತಾರೆ. ಇದನ್ನು ಸರಿ ಮಾಡಲಿ. ರಿಕವರಿಯಲ್ಲಿ ಏನು ಮೋಸ ಆಗುತ್ತಿದೆಯೋ ಅದನ್ನು ಸರಿಪಡಿಸಬೇಕಿದೆ. ಅದರ ಜೊತೆಗೆ ತೂಕದಲ್ಲಿನ ಮೋಸವನ್ನೂ ಸರಿ ಮಾಡಬೇಕೆಂದು ತಿಳಿಸಿದರು.

ತಮಿಳುನಾಡಿನಲ್ಲಿ ರಿಕವರಿ ಕಮ್ಮಿ ಇರುವುದರಿಂದ ಇತ್ತೀಚೆಗೆ ಅಲ್ಲಿನ ಸರ್ಕಾರ ಪ್ರತಿ ಟನ್‍ಗೆ 703 ರೂಪಾಯಿ ಕೊಟ್ಟಿದೆ. ಎಲ್ಲಿಯೂ ಸಹಿತ ಎಂಎಸ್‍ಪಿಗೂ ಮತ್ತು ರೈತರಿಗೆ ಇವರು ಕೊಡುವ ಎಸ್‍ಎಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕರ್ನಾಟಕ ಸರಕಾರವು ರೈತರ ಪರಿಹಾರಕ್ಕೆ ತಕ್ಷಣವೇ ಬೇರೆ ರಾಜ್ಯ ಸರ್ಕಾರಗಳು ಮಾಡಿದಂತೆ ಮಾಡಬಹುದು. ಒಂದು ತನ್ನ ಬೊಕ್ಕಸದಿಂದ ಕೊಡಬೇಕು ಮತ್ತು ಇಲ್ಲವೇ ಎಸ್‍ಎಪಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

ಯಾವ ರಾಜ್ಯದಲ್ಲಿಯೂ ಕಬ್ಬು ಬೆಳೆಗಾರರ ಸಮಸ್ಯೆ ಇಲ್ಲ. ಮಹಾರಾಷ್ಟ್ರದಲ್ಲಿ ಇಲ್ಲ, ಉತ್ತರ ಪ್ರದೇಶದಲ್ಲಿ ಇಲ್ಲ, ಹರಿಯಾಣದಲ್ಲಿ ಇಲ್ಲ, ಪಂಜಾಬ್‍ನಲ್ಲಿ ಇಲ್ಲ, ಉತ್ತರಾಖಂಡದಲ್ಲಿ ಇಲ್ಲ, ತಮಿಳುನಾಡಿನಲ್ಲಿ ಇಲ್ಲ. ಕರ್ನಾಟಕದಲ್ಲಿ ಇದು ಆಗಿದ್ದರೆ, ಇಲ್ಲಿನ ರಾಜ್ಯ ಸರ್ಕಾರದ್ದು ಇಲ್ಲಿ ಏನೋ ದೋಷ ಇದೆ. ಇದನ್ನ ಸರಿ ಮಾಡಿ ಎಂದರು. ನಾವು ರಾಜಕೀಯ ಮಾಡಲು ಹೊರಟಿಲ್ಲ, ನಾವು ನಿಮಗೆ ಸಲಹೆ ಕೊಡುತ್ತಿದ್ದೇವೆ. ಎಲ್ಲಾ ರಾಜ್ಯಗಳು ಕೊಟ್ಟಂತೆ ನೀವೊಂದು ಪರಿಹಾರ ಕೊಡಿ ಎಂದು ತಿಳಿಸಿದರು.

About The Author