Political News: ಬೆಂಗಳೂರಿನ ಕಸ ಗುಡಿಸುವುದಕ್ಕೆ 617 ಕೋಟಿ ರೂ ಬಾಡಿಗೆ ಕಟ್ಟಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕಸ ಗುಡಿಸುವ ನೆಪದಲ್ಲಿ ಕಮಿಷನ್ ಹಣವನ್ನು ಬಾಚಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇಲ್ಲದಿದ್ದಲ್ಲಿ ಬೆಂಗಳೂರಿನ ಕಸ ಗುಡಿಸುವುದಕ್ಕೆ 617 ಕೋಟಿ ರೂ ಬಾಡಿಗೆ ಕಟ್ಟಲು ಮುಂದಾಗಿರುವ ಇವರ ನಿರ್ಧಾರದ ಹಿಂದಿನ ತರ್ಕಕ್ಕೆ, ಮೊದಲು ಕಾಂಗ್ರೆಸ್ ಸರ್ಕಾರ ಉತ್ತರಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
46 ಯಂತ್ರಗಳನ್ನು 7 ವರ್ಷಕ್ಕೆ 613 ಕೋಟಿ ರೂ.ಗೆ ಬಾಡಿಗೆಗೆ ಪಡೆಯುತ್ತಿದೆ, ಅಂದರೆ ಇದು ಪ್ರತಿ ಯಂತ್ರಕ್ಕೆ ವಾರ್ಷಿಕ 1.9 ಕೋಟಿ ರೂ. ಬಾಡಿಗೆಯಾಗುತ್ತದೆ. ಒಂದು ಯಂತ್ರದ ಮಾರುಕಟ್ಟೆ ಬೆಲೆ ಸುಮಾರು 1.5 ರಿಂದ 3 ಕೋಟಿ ರೂ. ಎನ್ನಲಾಗಿದೆ. ಒಂದು ಯಂತ್ರವನ್ನು 7 ವರ್ಷಕ್ಕೆ ಬಾಡಿಗೆಗೆ ಪಡೆಯಲು, ಅದನ್ನು ಹೊಸದಾಗಿ ಖರೀದಿಸುವುದಕ್ಕಿಂತಲೂ ದುಬಾರಿಯಾಗಿ ಜನರ ಹೆಚ್ಚಿನ ತೆರಿಗೆ ಹಣವನ್ನು ಸರ್ಕಾರ ಏಕೆ ಖರ್ಚು ಮಾಡುತ್ತಿದೆ? ತಾಂತ್ರಿಕ ಸಮಿತಿ ‘ಖರೀದಿ’ಗೆ ಶಿಫಾರಸು ಮಾಡಿದರೂ, ದುಬಾರಿ ‘ಬಾಡಿಗೆ’ ಆಯ್ಕೆ ಮಾಡಿದ್ದು ಏಕೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
BBMP ನೌಕರರಿಗೆ ಪಾವತಿಸಲು ಹಣವಿಲ್ಲದ ಕಾರಣ, ನಿರ್ವಹಣೆ ಇಲ್ಲದೆ ಈಗಾಗಲೇ 26 ಯಂತ್ರಗಳು ಬಳಕೆಯಾಗದೆ ಧೂಳು ತಿನ್ನುತ್ತಿವೆ. ಅದರ ಧೂಳು ತೆಗೆದು ಬಳಸಲು ಇವರಿಗೆ ಆಗುತ್ತಿಲ್ಲ. ಆದ್ದರಿಂದ ಈ ‘ಧೂಳು-ಕಸ’ ಭಾಗ್ಯದ ರೂವಾರಿಗಳು ಯಾರು ಎಂದು ರಾಜ್ಯ ಸರ್ಕಾರ ಮೊದಲು ಉತ್ತರಿಸಲಿ ಎಂದು ವಿಜಯೇಂದ್ರ ಹೇಳಿದ್ದಾರೆ.

